ಫ್ರಾನ್ಸ್‌ನಲ್ಲಿ ರಾಜಕೀಯ ಆಶ್ರಯ ಕೋರಿದ ಅಸಿಯಾ ಬೀಬಿ

Update: 2020-02-25 15:47 GMT

ಪ್ಯಾರಿಸ್, ಫೆ. 25: ದೇವನಿಂದನೆ ಆರೋಪದಲ್ಲಿ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಂಡು ಕೆನಡಕ್ಕೆ ಪರಾರಿಯಾಗಿರುವ ಪಾಕಿಸ್ತಾನದ ಕ್ರೈಸ್ತ ಮಹಿಳೆ ಅಸಿಯಾ ಬೀಬಿ, ತಾನು ಫ್ರಾನ್ಸ್‌ನಿಂದ ರಾಜಕೀಯ ಆಶ್ರಯವನ್ನು ಕೋರುವುದಾಗಿ ಸೋಮವಾರ ಹೇಳಿದ್ದಾರೆ.

‘‘ಫ್ರಾನ್ಸ್‌ನಲ್ಲಿ ಜೀವಿಸಬೇಕೆನ್ನುವುದು ನನ್ನ ದೊಡ್ಡ ಆಸೆ’’ ಎಂದು ಆರ್‌ಟಿಎಲ್ ರೇಡಿಯೊಗೆ ನೀಡಿದ ಸಂದರ್ಶನವೊಂದರಲ್ಲಿ ಬೀಬಿ ಹೇಳಿದರು. 2018ರಲ್ಲಿ ಕುಟುಂಬ ಸದಸ್ಯರ ಜೊತೆ ಕೆನಡಕ್ಕೆ ಪಲಾಯನಗೈದ ಬಳಿಕ, ಅವರು ಮೊದಲ ಬಾರಿಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ.

ಅವರ ಫ್ರೆಂಚ್ ಭಾಷೆಯ ಪುಸ್ತಕ ‘ಎನ್‌ಫಿನ್ ಲೈಬರ್’ (ಕೊನೆಗೂ ಸ್ವತಂತ್ರ) ಕಳೆದ ತಿಂಗಳು ಬಿಡುಗಡೆಗೊಂಡ ಬಳಿಕ, ಅವರು ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ.

ಫ್ರಾನ್ಸ್ ಪತ್ರಕರ್ತೆ ಆ್ಯನ್-ಇಸಾಬೆಲ್ ಟಾಲೆಟ್ ಈ ಪುಸ್ತಕವನ್ನು ಬರೆದಿದ್ದಾರೆ. ಮರಣದಂಡನೆಯಿಂದ ಅಸಿಯಾ ಬೀಬಿಯನ್ನು ಪಾರು ಮಾಡಲು ಟಾಲೆಟ್ ಭಾರೀ ಹೋರಾಟ ನಡೆಸಿದ್ದರು.

ದೇವನಿಂದನೆ ಆರೋಪದಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು 2010ರಲ್ಲಿ ಅಸಿಯಾ ಬೀಬಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2018ರಲ್ಲಿ ಸುಪ್ರೀಂ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿತು.

ಕೆನಡಕ್ಕೆ ಅತ್ಯಂತ ಕೃತಜ್ಞ

ಪಾಕಿಸ್ತಾನದಿಂದ ಪಲಾಯನಗೈದಂದಿನಿಂದ ಅಸಿಯಾ ಬೀಬಿ ಕೆನಡದಲ್ಲಿ ರಹಸ್ಯ ಸ್ಥಳವೊಂದರಲ್ಲಿ ಪೊಲೀಸ್ ಭದ್ರತೆಯೊಂದಿಗೆ ಜೀವಿಸುತ್ತಿದ್ದಾರೆ.

‘‘ನಾನು ಖಂಡಿತವಾಗಿಯೂ ಕೆನಡಕ್ಕೆ ತುಂಬಾ ಆಭಾರಿಯಾಗಿದ್ದೇನೆ. ಪಾಕಿಸ್ತಾನದ ದೇವನಿಂದನೆ ಕಾನೂನಡಿ ಈಗಲೂ ಬಂಧನದಲ್ಲಿರುವ ಇತರರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಿ ಅಧಿಕಾರಿಗಳನ್ನು ಒತ್ತಾಯಿಸಲು ಟಾಲೆಟ್ ಜೊತೆಗೆ ಕೆಲಸ ಮಾಡಲು ಬಯಸಿದ್ದೇನೆ’’ ಎಂದು ಅಸಿಯಾ ಬೀಬಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News