ಅಕ್ರಮ ಕೊಳವೆ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಬೇಡಿ: ಶಾಸಕ ಮಠಂದೂರು

Update: 2020-02-25 17:17 GMT

ಪುತ್ತೂರು: ನಗರಸಭಾ ವ್ಯಾಪ್ತಿಯ ಬನ್ನೂರು ಕಾಲನಿಯಲ್ಲಿ ಅಕ್ರಮವಾಗಿ ಕೊಳವೆ ಬಾವಿಯನ್ನು ಕೊರೆಯಿಸಲು ಯತ್ನಿಸಿದ ಮತ್ತು ಈ ಕಾಮಗಾರಿಯನ್ನು ತಡೆಯಲು ಪುತ್ತೂರು  ನಗರ ಪೊಲೀಸರ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಸಂಜೀವ ಮಠಂದೂರು ಯಾವುದೇ ಅಕ್ರಮ ನಿರ್ಮಾಣಗಳಿಗೆ ಅವಕಾಶ ನೀಡದಂತೆ ನಗರಸಭೆಯ ಅಧಿಕಾರಿಗಳು ಮತ್ತು ಪೊಲೀಸರಿಗೆ  ಸೂಚನೆ ನೀಡಿದ್ದಾರೆ.

ಅಕ್ರಮ ನಿರ್ಮಾಣ ಯತ್ನಗಳಿಗೆ ಸಂಬಂಧಿಸಿದಂತೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಅಥವಾ ನಗರಸಭಾ ಅಧಿಕಾರಿ ಗಳು ಮೌನವಹಿಸಿ ಯಾವುದೇ ರೀತಿಯ ಕಾನೂನು ಮತ್ತು ಸುವ್ಯಸ್ಥೆಗೆ ಭಂಗವಾದರೆ ಸಂಬಂಧಪಟ್ಟ ಅಧಿಕಾರಿಗಳೇ ಅದಕ್ಕೆ ನೇರ ಜವಾಬ್ದಾರರಾಗುತ್ತಾರೆ. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಬನ್ನೂರಿನಲ್ಲಿ ಅಕ್ರಮವಾಗಿ ಕೊಳವೆ ಬಾವಿ ಕೊರೆಯಿಸುವುದನ್ನು ನಗರಸಭೆಯ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಆದರೆ ಇಂತಹ ಕಾರ್ಯಾಚರಣೆಗೆ ರಕ್ಷಣೆ ನೀಡಬೇಕಾದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿ ಜವಾಬ್ದಾರಿಯಿಂದ ಜಾರಿ ಕೊಂಡಿದ್ದಾರೆ. ಮೊದಲು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಅಲ್ಲಿಂದ ಹಿಂತಿರುಗಿ ಹೋಗಲು ಠಾಣಾಧಿಕಾರಿಯವರ ಸೂಚನೆಯೇ ಕಾರಣ ಎಂದು ಸ್ಥಳೀಯ ನಾಗರಿಕರಿಂದ ತನಗೆ ದೂರು ಬಂದಿದೆ ಎಂದಿರುವ ಅವರು ಅಕ್ರಮ ಕಾಮಗಾರಿಯನ್ನು ನಿಲ್ಲಿಸುವ ಹೊಣೆಗಾರಿಕೆಯಿಂದ ಜಾರಿಕೊಂಡು ಅಕ್ರಮವಾಗಿ ಕೊಳವೆ ಬಾವಿ ಕೊರೆಯಿಸುವವರಿಗೆ ಪರೋಕ್ಷ ಬೆಂಬಲ ನೀಡಿದ ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿಯವರ ವರ್ತನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಬನ್ನೂರು ಕಾಲನಿ ನಿವಾಸಿಗಳು ಮಂಗಳವಾರ ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿಯಾಗಿ, ರವಿವಾರ ನಸುಕಿನ ವೇಳೆ ಖಾಸಗಿ ವ್ಯಕ್ತಿಯೊಬ್ಬರು ಕಾಲನಿಯಲ್ಲಿ ಕೊಳವೆಬಾವಿ ಕೊರೆಯಲು ಆರಂಭಿಸಿದ ಘಟನೆಯ ಕುರಿತು ಅವರಿಗೆ ವಿವರಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಕಾಮಗಾರಿ ತಡೆಯಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ದೂರಿಕೊಂಡರು. ಅವರ ಮನವಿ ಆಲಿಸಿದ ಶಾಸಕರು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆ ಹೊರತಾಗಿ ಯಾರಿಗೂ ಕೊಳವೆಬಾವಿ ಕೊರೆಯಿಸಲು ಅನುಮತಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News