ಮೊದಲ ಬಾರಿ ಡಿಆರ್‌ಎಸ್ ಬಳಕೆ

Update: 2020-02-25 18:04 GMT

ರಾಜ್‌ಕೋಟ್, ಫೆ.25: ಸೌರಾಷ್ಟ್ರ ಹಾಗೂ ಗುಜರಾತ್ ತಂಡಗಳ ನಡುವೆ ರಾಜ್‌ಕೋಟ್‌ನಲ್ಲಿ ಶನಿವಾರ ಆರಂಭವಾಗಲಿರುವ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್)ಜಾರಿ ಮಾಡಲಾಗುತ್ತದೆ.

ಉಭಯ ತಂಡಗಳಿಗೆ ಪ್ರತಿ ಇನಿಂಗ್ಸ್‌ನಲ್ಲಿ ನಾಲ್ಕು ರೆಫರಲ್ಸ್ ನೀಡಲಾಗುತ್ತದೆ. ಆದರೆ, ಡಿಆರ್‌ಎಸ್ ಟೆಕ್ನಾಲಜಿಯಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಇರುವಂತೆ ಹಾಕ್-ಐ ಹಾಗೂ ಅಲ್ಟ್ರಾ ಎಡ್ಜ್ ಇರುವುದಿಲ್ಲ.

  ರಣಜಿ ಟ್ರೋಫಿಯಲ್ಲಿ ಇದೇ ಮೊದಲ ಬಾರಿ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್)ಪರಿಚಯಿಸಲಾಗುವುದು. 2019-20ರ ಸಾಲಿನ ರಣಜಿ ಟ್ರೋಫಿಯ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಡಿಆರ್‌ಎಸ್ ಸಿಸ್ಟಂ ಇರಲಿದೆ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಂಗಳವಾರ ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಿದೆ. ‘‘ರಣಜಿ ಟ್ರೋಫಿಯ ಸೆಮಿ ಫೈನಲ್‌ನಲ್ಲಿ ಡಿಆರ್‌ಎಸ್‌ನ ಮಿತ ಬಳಕೆ ಮಾಡುವ ಯೋಜನೆಯಿದೆ. ನಾಕೌಟ್ ಹಂತಗಳಲ್ಲಿ ಈ ಪದ್ದತಿ ಬಳಸುವ ಇರಾದೆ ಇಲ್ಲ’’ ಎಂದು ಕಳೆದ ವಾರ ಬಿಸಿಸಿಐ ಕ್ರಿಕೆಟ್ ವಿಭಾಗದ ಪ್ರಧಾನ ಪ್ರಬಂಧಕ ಸಾಬಾ ಕರೀಂ ಹೇಳಿದ್ದರು. ರಣಜಿ ಟ್ರೋಫಿಯಲ್ಲಿ ಡಿಆರ್‌ಎಸ್ ಬಳಕೆಯನ್ನು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಶಾ ಸ್ವಾಗತಿಸಿದ್ದಾರೆ. ‘‘ರಣಜಿಯ ಜೊತೆಗೆ ವಿಜಯ ಹಝಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಪ್ರಮುಖ ಟೂರ್ನಿಗಳಾಗಿವೆ. ಇಂತಹ ಟೂರ್ನಿಯಲ್ಲಿ ಕನಿಷ್ಠ ಪಕ್ಷ ಸೆಮಿ ಫೈನಲ್ ಹಾಗೂ ಫೈನಲ್‌ನಲ್ಲಾದರೂ ಈ ಪದ್ದತಿಯನ್ನು ಬಳಸಬೇಕು’’ ಎಂದರು. ಕರ್ನಾಟಕ ಹಾಗೂ ಬಂಗಾಳ ವಿರುದ್ಧ ಕೋಲ್ಕತಾದಲ್ಲಿ ರಣಜಿ ಟ್ರೋಫಿಯ ಮತ್ತೊಂದು ಸೆಮಿ ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News