ನೊವಾಕ್ ಜೊಕೊವಿಕ್ ಶುಭಾರಂಭ

Update: 2020-02-25 18:08 GMT

ದುಬೈ, ಫೆ.25: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಶುಭಾರಂಭ ಮಾಡಿದ್ದಾರೆ.

ಅಗ್ರ ಶ್ರೇಯಾಂಕದ ಹಾಗೂ ನಾಲ್ಕು ಬಾರಿಯ ಚಾಂಪಿಯನ್ ಜೊಕೊವಿಕ್ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಟ್ಯುನಿಶಿಯದ ವೈರ್ಲ್ಡ್ ಕಾರ್ಡ್ ಆಟಗಾರ ಮಾಲೆಕ್ ಜಝಿರಿ ಅವರನ್ನು 6-1, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. 2016ರ ಬಳಿಕ ಮೊದಲ ಬಾರಿ ದುಬೈ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿರುವ ಜೊಕೊವಿಕ್ ವಿಶ್ವದ 260ನೇ ರ್ಯಾಂಕಿನ ಆಟಗಾರ ಜಝಿರಿ ವಿರುದ್ಧ ಸುಲಭ ಜಯ ದಾಖಲಿಸಿದರು.

ಎಟಿಪಿ ಕಪ್‌ನಲ್ಲಿ ಸರ್ಬಿಯ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿರುವ ಜೊಕೊವಿಕ್ 8ನೇ ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಿ ದಾಖಲೆ ನಿರ್ಮಿಸಿದ್ದರು. ಈ ಋತುವಿನಲ್ಲಿ ಆಡಿರುವ ಎಲ್ಲ 14 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಫಿಲಿಪ್ ಕೊಹ್ಲ್ಸ್‌ಕ್ರೈಬೆರ್‌ರನ್ನು ಎದುರಿಸಲಿದ್ದಾರೆ. ಈಜಿಪ್ಟ್ ನ ಮುಹಮ್ಮದ್ ಸಫ್ವಾತ್‌ರನ್ನು 4-6, 6-4, 6-0 ಅಂತರದಿಂದ ಮಣಿಸಿದ ಜರ್ಮನಿಯ ಹಿರಿಯ ಆಟಗಾರ ಫಿಲಿಪ್ ಎರಡನೇ ಸುತ್ತಿಗೆ ತಲುಪಿದ್ದಾರೆ.

‘‘ನನ್ನ ಆಟದ ಶೈಲಿ ನನಗೆ ಸಂತಸ ತಂದಿದೆ. 2016ರಿಂದ ನಾನು ಇಲ್ಲಿ ಆಡಿರಲಿಲ್ಲ. ನಾನು ಈ ಟೆನಿಸ್ ಅಂಗಣ ಹಾಗೂ ಈ ನಗರದಿಂದ ವಂಚಿತನಾಗಿದ್ದೆ. ಇಂತಹ ಪಂದ್ಯಗಳಲ್ಲಿ ಫಿಲಿಪ್ ಚೆನ್ನಾಗಿ ಆಡುತ್ತಾರೆ. ಅವರ ವಿರುದ್ಧ ಪಂದ್ಯಕ್ಕೆ ಸಜ್ಜಾ ಗಿದ್ದೇನೆ’’ ಎಂದು ಜೊಕೊವಿಕ್ ಹೇಳಿದ್ದಾರೆ.

ಇದಕ್ಕೂ ಮೊದಲು ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಶ್ಯದ ಕರೆನ್ ಖಚನೊವ್ ಕಝಖ್‌ಸ್ತಾನದ ಮಿಖೈಲ್ ಕುಕುಶ್‌ಕಿನ್ ವಿರುದ್ಧ 7-6(7/2), 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ವಿಶ್ವದ ನಂ.17ನೇ ಆಟಗಾರ ಖಚನೊವ್ ಎರಡು ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡು ದ್ವಿತೀಯ ಸುತ್ತಿಗೆ ತೇರ್ಗಡೆಯಾದರು.

ಖಚನೊವ್ ಅವರ ಸಹ ಆಟಗಾರ, ವಿಶ್ವದ ನಂ.14ನೇ ರ್ಯಾಂಕಿನ ಆ್ಯಂಡ್ರೆ ರುಬ್ಲೆವ್ ಇಟಲಿಯ ಲೊರೆಂರೊ ಮುಸೆಟ್ಟಿ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿ ಮುಂದಿನ ಸುತ್ತಿಗೇರಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಫ್ರಾನ್ಸ್‌ನ ರಿಚರ್ಡ್ ಗಾಸ್ಕಟ್ ದಕ್ಷಿಣ ಆಫ್ರಿಕಾದ ಕ್ವಾಲಿಫೈಯರ್ ಲಾಯ್ಡಾ ಹ್ಯಾರಿಸ್‌ರನ್ನು 7-6(7/5), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News