ಸಚಿನ್ ರನ್ ದಾಖಲೆ ಯಾರು ಮುರಿಯುತ್ತಾರೆಂದು ಕಾದು ನೋಡುವೆ: ಇಂಝಮಮ್

Update: 2020-02-25 18:09 GMT

ಲಾಹೋರ್, ಫೆ.25: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಯಾರು ಮುರಿಯುತ್ತಾರೆಂದು ಕಾದು ನೋಡಲು ಬಯಸಿದ್ದೇನೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಝಮಮ್ ವುಲ್ ಹಕ್ ಹೇಳಿದ್ದಾರೆ.

  ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ 200 ಟೆಸ್ಟ್, 463 ಏಕದಿನ ಹಾಗೂ 1 ಟ್ವೆಂಟಿ-20 ಸಹಿತ ಒಟ್ಟು 664 ಪಂದ್ಯಗಳಲ್ಲಿ 34,357 ರನ್ ಗಳಿಸಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 28,016 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ‘‘ಸಚಿನ್ ತೆಂಡುಲ್ಕರ್‌ಕ್ರಿಕೆಟ್‌ಗಾಗಿ ಹುಟ್ಟಿದ್ದಾರೆ. ನಾನು ಯಾವಾಗಲೂ ತೆಂಡುಲ್ಕರ್ ಬಗ್ಗೆ ಮಾತನಾಡುತ್ತಿರುವೆ. ಅವರು 16-17ನೇ ವಯಸ್ಸಿನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವುದು ನನಗೆ ಈಗಲೂ ಅಚ್ಚರಿ ಎನಿಸುತ್ತಿದೆ. ಅಸಾಮಾನ್ಯ ಕ್ರಿಕೆಟಿಗನಿಗೆ ಮಾತ್ರ ಇದು ಸಾಧ್ಯ. ಸಚಿನ್ ಅವರು ತನ್ನ 16ನೇ ವಯಸ್ಸಿನಲ್ಲಿ ವಕಾರ್(ಯೂನಿಸ್) ಹಾಗೂ ವಸೀಂ(ಅಕ್ರಂ)ಅವರಂತಹ ಬೌಲರ್ ವಿರುದ್ಧ ಆಡಿದ್ದರು. ದಾಖಲೆಗಳು ಅವರ ಎರಡನೇ ದೊಡ್ಡ ಗುಣವಾಗಿದೆ. ಆ ಕಾಲದಲ್ಲಿ ಹೆಚ್ಚು ರನ್ ಗಳಿಸುವ ಕಲ್ಪನೆ ಇರಲಿಲ್ಲ. ಶ್ರೇಷ್ಠ ಆಟಗಾರರು 8ರಿಂದ 8,500 ರನ್ ಗಳಿಸುತ್ತಿದ್ದರು. ಕೇವಲ ಸುನೀಲ್ ಗವಾಸ್ಕರ್ ಮಾತ್ರ 10,000 ರನ್ ಗಳಿಸಿದ್ದರು. ಆಗ ಗವಾಸ್ಕರ್ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ನಂಬಲಾಗಿತ್ತು. ಆದರೆ, ಸಚಿನ್ ಎಲ್ಲ ದಾಖಲೆಗಳನ್ನು ಮುರಿದರು. ಸಚಿನ್‌ರ ರನ್ ದಾಖಲೆಯನ್ನು ಈಗ ಯಾರು ಮುರಿಯುತ್ತಾರೆಂದು ಕಾದು ನೋಡಲು ಬಯಸಿದ್ದೇನೆ’’ ಎಂದು ಇಂಝಮಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News