ಭಾರತ್ ಗ್ರೂಪ್ ಆಫ್ ಕಂಪನಿಯ ವಿವಿಧ ಕಚೇರಿ, ಮನೆ, ಉದ್ದಿಮೆಗಳಿಗೆ ದಾಳಿ

Update: 2020-02-26 13:41 GMT

ಮಂಗಳೂರು, ಫೆ.26: ಭಾರತ್ ಗ್ರೂಪ್ ಆಫ್ ಕಂಪನಿಯ ವಿವಿಧೆಡೆಯ ಕಚೇರಿ, ಮನೆ ಹಾಗೂ ಉದ್ದಿಮೆಗಳ ಮೇಲೆ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಗ್ರೂಪ್ ಆಫ್ ಕಂಪನಿಗೆ ಸೇರಿದ ಭಾರತ್ ಎಕ್ಸೋಸ್ಟಿಕ್ಸ್, ಭಾರತ್ ಬಿಲ್ಡರ್ಸ್, ಭಾರತ್ ಪ್ರಿಂಟರ್ಸ್, ಅಲಕನಂದಾ ಪ್ರಿಂಟರ್ಸ್, ಭಾರತ್ ಆಟೋಕಾರ್ಸ್, ಭಾರತ್ ಮಾಲ್, ಭಾರತ್ ಬುಕ್‌ಮಾರ್ಕ್ಸ್ ಸೇರಿದಂತೆ ವಿವಿಧ ಕಂಪನಿ ಹಾಗೂ ಉದ್ದಿಮೆಗಳಿಗೆ ಐಟಿ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಐಟಿ ಅಧಿಕಾರಿಗಳಿಗೆ ಮಂಗಳೂರಿನ ಅಧಿಕಾರಿಗಳು ಸಹಕರಿಸಿದ್ದಾರೆ. ಮಂಗಳೂರು, ಮೂಲ್ಕಿ, ತೊಕ್ಕೊಟ್ಟು, ಕಾರ್ಕಳಗಳಲ್ಲಿರುವ ಭಾರತ್ ಗ್ರೂಪ್‌ನ ಕಂಪನಿಗಳಿಗೆ ಕಾರ್ಯಾಚರಣೆ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ಸಂಜೆ ವೇಳೆಯೂ ಮುಂದುವರಿದಿದೆ.

ಮಂಗಳೂರಿನ ದಿ. ಬಿ.ಮಂಜುನಾಥ ಪೈ ಸ್ಥಾಪಿಸಿದ ಭಾರತ್ ಗ್ರೂಪ್‌ನ್ನು ಅವರ ಹಿರಿಯ ಪುತ್ರ ದಿ. ಗಣಪತಿ ಪೈ 1954ರಿಂದ ಬೆಳೆಸಿದ್ದರು. 30 ಬ್ರ್ಯಾಂಡ್ ಬೀಡಿಗಳ ತಯಾರಿಕಾ ಸಂಸ್ಥೆಯಾಗಿ ಭಾರತ್ ಬೀಡಿ ವರ್ಕ್ಸ್ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಹೊಂದಿದೆ. ಇವರ ನಾನಾ ಸಂಸ್ಥೆಗಳಲ್ಲಿ ಸುಮಾರು 50 ಸಾವಿರಕ್ಕಿಂತಲೂ ಅಧಿಕ ಉದ್ಯೋಗಿಗಳಿದ್ದಾರೆ. ಈ ಸಂಸ್ಥೆ ವಾರ್ಷಿಕ 400 ಕೋ.ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News