ಆನ್‌ಲೈನ್- ಇ ಕಾಮರ್ಸ್‌ನಿಂದ ವಿತರಕ ವ್ಯವಸ್ಥೆಗೆ ನಷ್ಟ: 28ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ

Update: 2020-02-26 07:45 GMT

ಮಂಗಳೂರು, ಫೆ. 26: ಆನ್‌ಲೈನ್ ಟ್ರೇಡ್ ಹಾಗೂ ಇ ಕಾಮರ್ಸ್ ಸಂಸ್ಥೆಗಳಿಂದ ಹಾಗೂ ಕಡಿತ ಮಾರಾಟ ಮಾಡುವ ಸೂಪರ್ ಮಾರ್ಕೆಟ್‌ಗಳಿಂದ ದೇಶದ ವಿತರಕ ವ್ಯವಸ್ಥೆಯೇ ಹಾಳಾಗಿದೆ. ಈ ವ್ಯವಹಾರ ನೀತಿಯನ್ನು ವಿರೋಧಿಸಿ ನಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಫೆ.28ರಂದು ಸ್ವಯಂಪ್ರೇರಿತ ಬಂದ್ ಕರೆ ನೀಡಲಾಗಿದೆ ಎಂದು ದ.ಕ. ವಿತರಕರ ಅಸೋಸಿಯೇಶನ್‌ನ ಅಧ್ಯಕ್ಷ ನಾಗೇಶ್ ಪೈ ಹೇಳಿದ್ದಾರೆ.
 
 ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆನ್‌ಲೈನ್ ಹಾಗೂ ಇ ಕಾಮರ್ಸ್ ವ್ಯವಹಾರದ ಹಾವಳಿಯಿಂದ ವಿತರಣೆ ವ್ಯವಹಾರ ಬಹಳಷ್ಟು ನಷ್ಟದಲ್ಲಿದೆ ಎಂದರು.

ಈಗಾಗಲೇ ಕೃಷಿ ಕ್ಷೇತ್ರವನ್ನು ಬಿಟ್ಟರೆ ಅತೀ ಹೆಚ್ಚು ಉದ್ಯೋಗ ಹಾಗೂ ಆದಾಯ ತಂದುಕೊಡುವುದು ವಿತರಣೆ ಕ್ಷೇತ್ರ. ಆದರೆ ಆನ್‌ಲೈನ್ ಟ್ರೇಡ್ ಸಂಸ್ಥೆಗಳು ಮೊಬೈಲ್, ಜವಳಿ ಹಾಗೂ ಔಷಧೀೀಯ ಕ್ಷೇತ್ರದಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸುವ ಮೂಲಕ ವಿತರಕರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡುತ್ತಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ನೀಡಿದರೆ ಯಾವುದೇ ಸಮಸ್ಯೆಯಿಲ್ಲ, ಆದರೆ ಆರೋಗ್ಯಕರವಲ್ಲದ ಪೈಪೋಟಿ ಸಲ್ಲದು. ವ್ಯವಹಾರದ ಸಮಾನ ನೀತಿ ನಿಯಮಗಳು ಎಲ್ಲರಿಗೂ ಇರಬೇಕು ಎಂದರು.

ಒಂದು ರಾಷ್ಟ್ರ ಒಂದು ತೆರಿಗೆಯ ಹಾಗೆ ಒಂದು ರಾಷ್ಟ್ರ ಒಂದು ದರ ಎಂಬ ನೀತಿ ಜಾರಿಗೆ ಬರಬೇಕು. ವಿತರಕರು ವ್ಯವಹಾರವನ್ನು ಸರಾಗವಾಗಿ ನಡೆಸಲು ಸರಕಾರವು ದೇಶದಲ್ಲಿ ಕಾನೂನನ್ನು ಜಾರಿ ಮಾಡಬೇಕು. ಇ ಕಾಮರ್ಸ್ ಮತ್ತು ಆನ್‌ಲೈನ್ ಟ್ರೇಡಿಂಗ್ ಇದರ ಬಗ್ಗೆ ದೂರು ಸಲ್ಲಿಸಲು ಸರಕಾರ ವೇದಿಕೆಯೊಂದನ್ನು ಹುಟ್ಟುಹಾಕಬೇಕು ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು ೆ.28ರಂದು ವಿತರಕರು ಸ್ವಯಂಪ್ರೇರಿತ ಬಂದ್ ಮಾಡುತ್ತೇವೆ ಎಂದರು.

ಈ ಸಂದರ್ಭ ಅಸೋಸಿಯೇಶನ್ ಶ್ರೀಧರ್ ಎಲ್. ಕಾಮತ್, ಗಣೇಶ್ ಕಾಮತ್, ಪ್ರಸಾದ್, ನಿಕೋಲಸ್ ಲೂವಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News