27ರಂದು ‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’ ಕಾರ್ಯಕ್ರಮ

Update: 2020-02-26 11:38 GMT

ಮಂಗಳೂರು, ಫೆ. 26: ಭಾರತೀಯ ಅಂಚೆ ಇಲಾಖೆಯ ಮಂಗಳೂರಿ ಮತ್ತು ಪುತ್ತೂರು ವಿಭಾಗಗಳಿಂದ ಫೆ. 27ರಂದು ‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’ ಕಾರ್ಯಕ್ರಮ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಸೇವೆಗಳು ಭಾರತಾದ್ಯಂತ 155531 ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 594 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಅಂಚೆಯಣ್ಣನ ಮೂಲಕವೂ ಮನೆಬಾಗಿಲಿನಲ್ಲಿ ಈ ಸೇವೆಗಳು ಲಭ್ಯ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಏನಿದು ‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’?
‘ನಿಮ್ಮ ಅಂಚೆ, ನಿಮ್ಮ ಬ್ಯಾಂಕ್, ಕ್ಷಣದಲ್ಲೇ ಖಾತೆ’ ವಿಶಿಷ್ಟ ಪರಿಕಲ್ಪನೆಯಾಗಿದೆ. ಎಲ್ಲಾ ಸಾರ್ವಜನಿಕರೂ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಖಾತೆಯನ್ನು ತೆರೆಯಲು ವಿಶೇಷ ವ್ಯವಸ್ತೆಗಳನ್ನು ಮಾಡಲಾಗಿದೆ. ಇದು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ.

ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ 100 ರೂ.ನೊಂದಿಗೆ ಖಾತೆ ತೆರೆಯಬಹುದು. ಈ ಖಾತೆ ತೆರೆದರೆ ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿಟಿಎಚ್ ರಿಚಾರ್ಜ್, ಮೊಬೈಲ್ ರಿಚಾರ್ಜ್‌ಗಳನ್ನು ಮಾಡಬಹುದು. ಬೇರೆ ಬ್ಯಾಂಕ್‌ಗಳಿಗೆ ದಿನದ 24 ಗಂಟೆಯೂ ಹಣ ಕಳುಹಿಸಬಹುದು.

ಅಂಚೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ ಅದಕ್ಕೆ ಹಣ ಹಾಕುವ ಅಥವಾ ಅದರಿಂದ ಹಣ ತೆಗೆಯುವ ಸೌಲಭ್ಯವೂ ಇದೆ. ಅಂಚೆ ಕಚೇರಿಯ ಆರ್‌ಡಿ, ಪಿಪಿಎಫ್,ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮಾ ಮಾಡಬಹುದು. ಸರದಿಯಲ್ಲಿ ನಿಲ್ಲಬೇಕಾಗಿಲ್ಲ. ಸರಕರಾದ ಬೇರೆ ಬೇರೆ ಇಲಾಖೆಗಳಿಂದ ದೊರೆಯುವ ಸಹಾಯಧನ, ವೃದ್ಧಾಪ್ಯ ವೇತನ, ವಿಕಲಚೇತನ ವೇತನ, ವಿಧವಾ ವೇತನ, ಇತ್ಯಾದಿಗಳನ್ನು ಅರ್ಹ ಫಲಾನುಭವಿಗಳು ಪಡೆಯಬಹುದು. ಕ್ಯೂಆರ್ ಕಾರ್ಡ್‌ನ್ನು ಉಚಿತವಾಗಿ ನೀಡಲಾಗುವುದು. ಫೆ. 27ರಂದು ದ.ಕ. ಜಿಲ್ಲೆಯ ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಈ ಖಾತೆಗಳನ್ನು ತೆರೆದು ಡಿಜಿಟಲ್ ಬ್ಯಾಂಕಿನ ಸೌಲಭ್ಯವನ್ನು ಸರಳವಾಗಿ ಮನೆಯಂಗಳದಲ್ಲೇ ಪಡೆದುಕೊಳ್ಳುವಂತೆ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News