ಅಭಿವೃದ್ಧಿ ಕಾಮಗಾರಿಗೆ ಪರ್ಸೆಂಟೇಜ್ ಪಡೆಯುತ್ತಿರುವ ಬಿಜೆಪಿ ಶಾಸಕರು: ರಮಾನಾಥ ರೈ ಆರೋಪ

Update: 2020-02-26 12:15 GMT

ಮಂಗಳೂರು, ಫೆ.26: ದ.ಕ. ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ಅಭಿವೃದ್ಧಿ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಪರ್ಸೆಂಟೇಜ್ ಸಿಗುವಂಥ ಅಭಿವೃದ್ಧಿ ಕೆಲಸಗಳನ್ನು ಮಾತ್ರ ಮಾಡಿಕೊಂಡಿದ್ದಾರೆಯೇ ಹೊರತು, ಬೇರೆ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಶಾಸಕರು ಎಂದು ಹೇಳುತ್ತಿಲ್ಲ. ಕೆಲವು ಶಾಸಕರು ಅಭಿವೃದ್ಧಿ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಪಡೆಯುತ್ತಿದ್ದಾರೆ. ಬೇಕಾದರೆ ಗುತ್ತಿಗೆದಾರರನ್ನೇ ಕೇಳಿ ಎಂದು ರೈ ಆರೋಪಿಸಿದರು.

ಹಿಂದೆ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಮಾಫಿಯಾ ನಡೆಯುತ್ತಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುತ್ತಿದ್ದರು. ಈಗ ಅಕ್ರಮ ಮರಳುಗಾರಿಕೆ ನಡೆಯುವ ಜಾಗಗಳಿಗೆ ಹೋಗಬೇಡಿ ಎಂದು ಪೊಲೀಸರಿಗೇ ಧಮ್ಕಿ ಹಾಕುತ್ತಿದ್ದಾರೆ ಎಂದು ದೂರಿದರು.

ವಿರೋಧ ಪಕ್ಷ ಸ್ಥಾನದಲ್ಲಿ ಕೂರಲು ಕಾಂಗ್ರೆಸ್ ನಾಲಾಯಕ್ ಎಂಬ ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ರೈ, ಅಧಿಕಾರ ನಡೆಸಲು ಬಿಜೆಪಿ ನಾಲಾಯಕ್ ಎಂದು ತಿರುಗೇಟು ನೀಡಿದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಎಷ್ಟು ಮಂದಿಗೆ ಪರಿಹಾರ ಸಿಕ್ಕಿದೆ ಹೇಳಿ ಎಂದು ಪ್ರಶ್ನಿಸಿದರೆ ಉತ್ತರ ನೀಡುವುದು ಬಿಟ್ಟು ನೆಹರೂ ಸರಿಯಿಲ್ಲ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸರಿಯಿಲ್ಲ ಎನ್ನುತ್ತಾರೆ. ಅಧಿಕಾರ ಸಿಕ್ಕಿದಾಗಲೂ ವಿರೋಧ ಪಕ್ಷದ ಬಗ್ಗೆ ಮಾತನಾಡುವವರು ತಮ್ಮ ಕೆಲಸದ ಜವಾಬ್ದಾರಿಯನ್ನೇ ಮರೆತಿದ್ದಾರೆ. ಬಡವರಿಗೆ ಒಂದೇ ಒಂದು ಮನೆ ಕಟ್ಟಿಸಿಕೊಡಲು ಇವರಿಂದ ಆಗಿಲ್ಲ. ಅಧಿಕಾರ ನಡೆಸಲು ಇವರು ನಾಲಾಯಕ್ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ರೈ ಟೀಕಿಸಿದರು.

ಪಕ್ಷವು ಸ್ವಾತಂತ್ರ ಸಂಗ್ರಾಮದಲ್ಲಿ ಅವಿರತವಾಗಿ ಹೋರಾಟ ನಡೆಸಿದೆ. ಇಂದಿರಾಗಾಂಧಿ, ರಾಜೀವ್‌ಗಾಂಧಿ, ಜವಾಹರ ಲಾಲ್ ನೆಹರೂ ದೇಶಕ್ಕಾಗಿ ದುಡಿದು ಪ್ರಾಣ ಬಲಿದಾನ ಮಾಡಿದ್ದಾರೆ. ದೇಶಕ್ಕೆ ಕೊಡುಗೆ ಕೊಟ್ಟ ಪಕ್ಷವನ್ನು ಅಪಮಾನಿಸುತ್ತಿರುವುದು ಖಂಡನೀಯ. ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಯವರಿಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಡವರಿಗೆ ನಿಜವಾದ ಕಾರ್ಯಕ್ರಮ ಕೊಟ್ಟ ಪಕ್ಷ ನಮ್ಮದು. ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಸಮರ್ಪಕ ಅನುದಾನ ಬಿಡುಗಡೆಯಾಗಿತ್ತು. ಮೊದಲಿನಿಂದಲೂ ಅಭಿವೃದ್ಧಿ ಕಾರ್ಯದಲ್ಲಿ ಗುರುತಿಸಿಕೊಂಡು ಬಂದಿರುವ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದರು.

ಬಿಜೆಪಿ ಮುಕ್ತ ಭಾರತ: ದೇಶದ ಹಿಂದಿ ಬೆಲ್ಟ್ ಎನಿಸಿಕೊಂಡಿದ್ದ ರಾಜ್ಯಗಳಲ್ಲಿ ‘ಕಮಲ’ ಬಾಡಿ ಹೋಗಿದ್ದು, ಇತ್ತೀಚಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ರಾಜ್ಯದಲ್ಲೂ ಇತ್ತೀಚೆಗೆ ನಡೆದ ಪುರಸಭೆ, ಮನಪಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿದೆ. ಭಾರತದಿಂದ ಬಿಜೆಪಿ ಮುಕ್ತವಾಗುವುದು ನಿಶ್ವಿತ. ರಾಜ್ಯದಲ್ಲಿ ದುರಹಂಕಾರದ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಕ್ಕೂ ಜನತೆ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ಅಬ್ದುಲ್ ರವೂಫ್, ನವೀನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಸುಭೋದಯ್ ಆಳ್ವ, ಎಸ್.ಅಪ್ಪಿ, ನಿರಜ್‌ಪಾಲ್, ಸಂತೋಷ್‌ಕುಮಾರ್ ಶೆಟ್ಟಿ, ಮುಹಮ್ಮದ್ ಕುಂಜತ್‌ಬೈಲ್, ಹರಿನಾಥ್ ಕೆ., ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ದೊರೆಸ್ವಾಮಿ ನಿಂದನೆ ದೇಶದ್ರೋಹ: ರಮಾನಾಥ ರೈ
ಹಿರಿಯ ಸ್ವಾತಂತ್ರ ಹೋರಾಟಗಾರರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ದೊರೆಸ್ವಾಮಿಯನ್ನು ನಿಂದಿಸುವವರೇ ದೇಶದ್ರೋಹಿಗಳಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

‘ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ’ ಎಂದ ಬಿಜೆಪಿಯ ಶಾಸಕರ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಸ್ವಾತಂತ್ರ ಹೋರಾಟಗಾರರ ಬಗ್ಗೆ ಅಭಿಮಾನವಿಲ್ಲ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ಜವಾಹರಲಾಲ್ ನೆಹರೂ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಗಾಂಧೀಜಿಯವರಿಗೆ ಗುಂಡು ಹೊಡೆಯುವ ಅಣಕು ಪ್ರದರ್ಶನ ನಡೆಸುತ್ತಾರೆ. ಹಂತಕ ನಾಥೂರಾಮ್ ಗೋಡ್ಸೆಯ ಪೂಜೆ ಮಾಡುವುದು ದೇಶದ್ರೋಹವಲ್ಲವೇ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News