ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಹೋರಾಟ ಸಮಿತಿ ಆಗ್ರಹ

Update: 2020-02-26 13:26 GMT

ಮಂಗಳೂರು, ಫೆ.26: ಕಳೆದ ಐದು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿರುವ ಸುರತ್ಕಲ್ ಟೋಲ್ ಕೇಂದ್ರದ ಮೂರು ತಿಂಗಳ ಗುತ್ತಿಗೆಯ ಅವಧಿಯು ಫೆಬ್ರವರಿಗೆ ಕೊನೆಗೊಳ್ಳಲಿದೆ. 2018ರಲ್ಲಿ ಹೆದ್ದಾರಿ ಪ್ರಾಧಿಕಾರವು ತೆಗೆದುಕೊಂಡ ತೀರ್ಮಾನದಂತೆ ಸುರತ್ಕಲ್ ಟೋಲ್ ಕೇಂದ್ರದ ಟೋಲ್ ಸಂಗ್ರಹದ ಗುತ್ತಿಗೆಯನ್ನು ನವೀಕರಿಸಬಾರದು ಮತ್ತು ಟೋಲ್ಗೇಟ್ ತೆರವುಗೊಳಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ವೈ. ಭರತ್ ಶೆಟ್ಟಿ ಅವರನ್ನು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಐದು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ, ಆರು ತಿಂಗಳ ಅವಧಿಗೆ ಅನುಮತಿ ಪಡೆದ ಸುರತ್ಕಲ್ ಟೋಲ್ ಕೇಂದ್ರವು 9 ಕಿಮೀ ಅಂತರದಲ್ಲಿ ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡು ನಾಲ್ಕು ವರ್ಷಗಳು ಕಳೆದರೂ ಕೂಡ ಇನ್ನೂ ಅಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಮುಂದುವರಿದಿದೆ. ಈ ಬಗ್ಗೆ ‘ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ಯು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಳೆದ ಮೂರು ವರ್ಷದಿಂದ ಸತತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ ಕೂಡ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪತ್ರ ಹೋದರೆ ಎಲ್ಲಾ ಸರಿಯಾಗುತ್ತದೆ ಎಂದು ಸಂಸದ ನಳಿನ್ ಹೇಳಿದ್ದಾರೆ. ಆವಾಗ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು. ಇದೀಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದೆ. ಹಾಗಾಗಿ ಸಂಸದರು, ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಟೋಲ್‌ಗೇಟ್ ತೆರವುಗೊಳಿಸಲು ಮುಂದಾಗಬೇಕಿದೆ ಎಂದರು.

2018ರಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವು ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿತ್ತು. ವಿಲೀನದ ತೀರ್ಮಾನಕ್ಕೆ ನಿಯಮದಂತೆ ರಾಜ್ಯ ಸರಕಾರದ ಅನುಮೋದನೆಯನ್ನು ಪಡೆದುಕೊಂಡಿತು. ಆದರೆ ತೀರ್ಮಾನ ಕೈಗೊಂಡು ಎರಡು ವರ್ಷ ಸಂದರೂ ಕೂಡ ಟೋಲ್ ಗೇಟ್ ತೆರವುಗೊಳಿಸದೆ ಕುಂಟು ನೆಪಗಳನ್ನು ಮುಂದಿಟ್ಟು ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹದ ಗುತ್ತಿಗೆಯನ್ನು ನವೀಕರಿಸುತ್ತಾ ಬರಲಾಗಿದೆ. ಈ ಕುರಿತು ಸ್ಥಳೀಯ ಸಾರ್ವಜನಿಕ ಸಾರಿಗೆ ವಾಹನ ಮಾಲಕರ ಸಂಘಟನೆಗಳನ್ನು ರಿಯಾಯತಿ ದರದ ಆಮಿಷ, ಬೆದರಿಕೆಗಳನ್ನು ಒಡ್ಡುವ, ಒಡೆದಾಳುವ ತಂತ್ರಗಳ ಮೂಲಕ ಮೌನವಾಗಿಸಲಾಗುತ್ತಿದೆ. ಸ್ಥಳೀಯ ಖಾಸಾಗಿ ವಾಹನಗಳಿಗೆ ಸುಂಕ ವಿನಾಯತಿ ನೀಡಿ ಹೊರ ತಾಲೂಕಿನ ವಾಹನ ಸವಾರರಿಂದ ಅಕ್ರಮವಾಗಿ, ಬಲವಂತದ ಟೋಲ್ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಪಡುಬಿದ್ರೆ-ಉಡುಪಿ ಕಡೆಯಿಂದ ಬರುವ ಖಾಸಗಿ ವಾಹನ ಚಾಲಕರು 9 ಕಿಮೀ ಅಂತರದಲ್ಲಿ ಎರಡೆರಡು ಕಡೆ ಟೋಲ್ ಪಾವತಿಸುವ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕ ಸಾರಿಗೆಗಳು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಬಸ್ ಮುಂತಾದ ಪ್ರಯಾಣಿಕ ವಾಹನಗಳು ದುಬಾರಿ ಸುಂಕದ ಹೊರೆಯನ್ನು ಪ್ರಯಾಣಿಕರ ತಲೆಯ ಮೇಲೆ ಹಾಕಲು ಯತ್ನಿಸುತ್ತಿವೆ. ಇದು ಈ ಮಾರ್ಗದಲ್ಲಿ ಎಲ್ಲಾ ವಿಭಾಗದ ಸ್ವಂತ ವಾಹನ ಸವಾರರು, ಸಾರ್ವಜನಿಕ ವಾಹನ ಬಳಸುವ ಪ್ರಯಾಣಿಕರಿಗೆ ಓಡಾಟವನ್ನು ಅತಿ ದುಬಾರಿಯಾಗಿಸಿದೆ. ಈ ನಡುವೆ ಫಾಸ್ಟಾಗ್, ಟೋಲ್ ಸಂಗ್ರಹ ನಿಯಮಗಳನ್ನು ಮುಂದಿಟ್ಟು ಸ್ಥಳೀಯ ವಾಹನಗಳ ಸುಂಕ ರಿಯಾಯತಿ, ವಿನಾಯತಿಗಳನ್ನು ಹಂತ ಹಂತವಾಗಿ ತೆಗೆದು ಹಾಕಲಾಗುತ್ತಿದೆ. ಪ್ರಶ್ನಿಸಿದವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಈ ರೀತಿ ಕಾನೂನುಗಳನ್ನು ಉಲ್ಲಂಘಿಸಿ ಜನರನ್ನು ಸುಲಿಗೆ ಮಾಡುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು. ವರ್ಷದ ಹಿಂದೆ ಅನಿರ್ಧಿಷ್ಟಾವಧಿ ಹೋರಾಟಗಳು ನಡೆದಾಗ ಟೋಲ್ ಗುತ್ತಿಗೆಯನ್ನು ನವೀಕರಿಸುವುದಿಲ್ಲ ಎಂದು ನೀಡಿದ್ದ ಭರವಸೆಯನ್ನು ಸಂಸದರು ಮರೆತು 2019ರ ನವೆಂಬರ್‌ನಲ್ಲಿ ಮೂರು ತಿಂಗಳ ಅವಧಿಗೆ ಟೋಲ್ ಸಂಗ್ರಹದ ಗುತ್ತಿಗೆಯನ್ನು ಟೆಂಡರ್ ಮೂಲಕ ನವೀಕರಿಸಲು ಅವಕಾಶ ಮಾಡಿಕೊಟ್ಟರು. ಆವಾಗಲೂ ಹೋರಾಟ ಸಮಿತಿಯ ನಿಯೋಗಕ್ಕೆ ಇದು ಕೊನೆಯ ನವೀಕರಣವಾಗಿದ್ದು, ಮೂರು ತಿಂಗಳ ಒಳಗಡೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಟೋಲ್ಗೇಟ್ ತೆರವುಗೊಳಿಸಲಾಗುವುದು ಎಂದು ಸಂಸದರು ಭರವಸೆ ನೀಡಿದ್ದರು. ಈಗ ಟೋಲ್ ಸಂಗ್ರಹ ಗುತ್ತಿಗೆಯ ಅವಧಿ ಕೊನೆಗೊಳ್ಳಲಿದೆ. ನಗರ ಪಾಲಿಕೆ, ರಾಜ್ಯ, ಕೇಂದ್ರ ಸರಕಾರಗಳು ಮತ್ತು ಎಲ್ಲಾ ಹಂತದ ಜನಪ್ರತಿನಿಧಿಗಳು ಬಿಜೆಪಿ ಪಕ್ಷೀಯರೇ ಆಗಿರುವುದರಿಂದ ತಾತ್ಕಾಲಿಕ ಟೋಲ್ ಕೇಂದ್ರದ ತೆರವುಗೊಳಿಸಲು ಸಂಸದರಿಗೆ, ಶಾಸಕರಿಗೆ ಯಾವ ಅಡ್ಡಿಯೂ ಇರುವುದಿಲ್ಲ. ಹಾಗಾಗಿ ಶೀಘ್ರ ಈ ಬಗ್ಗೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಪುನಃ ಆರಂಭಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ದಕ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಷಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್‌ಗಳಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ. ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಸದಾಶಿವ ಹೊಸದುರ್ಗ, ಹಕೀಂ ಮೂಲ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News