ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶ

Update: 2020-02-26 14:40 GMT

ಮಂಗಳೂರು, ಫೆ.26: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಚಿನ್ನ ಹಾಗೂ ವಿದೇಶಿ ಕರೆನ್ಸಿ ಸಾಗಾಟ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ದುಬೈಯಿಂದ ಮಂಗಳವಾರ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಕಾಸರಗೋಡು ಸಮೀಪದ ಉಪ್ಪಳದ ಮೊಯ್ದಿನ್ ಅರ್ಝನ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಈತನ ಬಳಿ 24 ಕ್ಯಾರೆಟ್ ಪರಿಶುದ್ಧತೆಯ 26,30,750 ರೂ. ಮೌಲ್ಯದ 619 ಗ್ರಾಂ ಚಿನ್ನ ಪತ್ತೆಯಾಗಿದೆ.

ಈತ ಚಿನ್ನವನ್ನು ಪೇಸ್ಟ್ ರೂಪದಲ್ಲಿ ರಬ್ಬರ್ ಮಾತ್ರೆಯೊಳಗೆ ಹಾಕಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ ಎನ್ನಲಾಗಿದೆ. ಆರೋಪಿಯನ್ನು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ತಡರಾತ್ರಿ ಭಟ್ಕಳದ ಆತಿಕ್ ರಹ್ಮಾನ್ ಎಂಬಾತ ಮಂಗಳೂರಿನಿಂದ ಸ್ಪೈಸ್ ಜೆಟ್ ಮೂಲಕ ದುಬೈಗೆ ವಿದೇಶಿ ಕರೆನ್ಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಈತನಿಂದ 16,400 ಯು.ಎಸ್.ಡಾಲರ್ ವಶಪಡಿಸಿಕೊಳ್ಳಲಾಗಿದೆ. ಇದರ ಭಾರತೀಯ ರೂಪಾಯಿ ಮೌಲ್ಯ 11,63,580 ರೂ. ಎಂದು ಅಂದಾಜಿಸಲಾಗಿದೆ. ಬಿಸ್ಕಿಟ್ ಪ್ಯಾಕೆಟ್‌ನೊಳಗಿಟ್ಟು ಬ್ಯಾಗ್‌ನಲ್ಲಿ ತುಂಬಿಸಿ ಅಕ್ರಮ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News