ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದ ಕೆ.ಸಿ. ನಾಯ್ಕ್ ರ ಪರಿಚಯ

Update: 2020-02-26 13:28 GMT

ಮಂಗಳೂರು: ಫೆ.27ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಂಗಳೂರು ವಿವಿಯಿಂದ ಈ ಬಾರಿ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕೆ.ಸಿ.ನಾಯ್ಕ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಗುತ್ತಿದೆ. 

ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದ ಕೆ.ಸಿ.ನಾಯ್ಕ್ ಅವರ ಪರಿಚಯ ಇಲ್ಲಿದೆ:

ಪೂರ್ಣ ಹೆಸರು : ಕೊಡಿಪಾಡಿ ಚಂದ್ರಶೇಖರ ನಾಯ್ಕ್

ತಂದೆ            : ದಿ. ಕೊಡಿಪಾಡಿ ದೇವಪ್ಪ ನಾಯ್ಕ್

ತಾಯಿ           : ದಿ. ಅಕ್ಕಯ್ಯ

ಜನನ            : 13.9.1939

ಜನನ ಸ್ಥಳ      : ದ.ಕ. ಜಿಲ್ಲೆಯ ಪುತ್ತೂರಿನ ಕೊಡಿಪಾಡಿ

ವಿದ್ಯಾಭ್ಯಾಸ    : ಪ್ರಾಥಮಿಕ ವಿದ್ಯಾಭ್ಯಾಸ - ಬೊಳುವಾರು ಪಂಚಾಯತ್ ಶಾಲೆ, ಪ್ರೌಢ – ಬೋರ್ಡ್ ಹೈಸ್ಕೂಲ್ ಪುತ್ತೂರು, ಕಾಲೇಜು – ಮಂಗಳೂರಿನ ಸರಕಾರಿ ಕಾಲೇಜು

ವಿದ್ಯಾರ್ಹತೆ     : ಬಿ.ಕಾಂ.

ಉದ್ಯೋಗ      : ಉದ್ಯಮಿ

ಕುಟುಂಬ        : ಪತ್ನಿ - ಶ್ರೀಮತಿ ಸಗುಣ ನಾಯ್ಕ್, ಪುತ್ರ - ಶ್ರೀ ಸಂಜಿತ್ ಸಿ ನಾಯ್ಕ್, ಸೊಸೆ - ಶ್ರೀಮತಿ ಅಂಜು ನಾಯ್ಕ್, ಪುತ್ರಿಯರು - ಶ್ರೀಮತಿ ರೇಶ್ಮಾ, ಶ್ರೀಮತಿ ರಮ್ಯಾ

ವಿವರ : ಕೊಡಿಪಾಡಿ ಚಂದ್ರಶೇಖರ ನಾಯ್ಕ್ (ಕೆ.ಸಿ. ನಾಯ್ಕ್) ಅವರು ಕರ್ನಾಟಕದ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಒಂದು ಪುಟ್ಟ ಗ್ರಾಮವಾದ ಕೊಡಿಪಾಡಿ ಎಂಬಲ್ಲಿ ಕೊಡಿಪಾಡಿ ದೇವಪ್ಪ ನಾಯ್ಕ್ – ಅಕ್ಕಯ್ಯ ದಂಪತಿಗಳ ಪುತ್ರರಾಗಿ 1939,ಸೆಪ್ಟೆಂಬರ್ 13 ರಂದು ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸವು ಸ್ಥಳೀಯ ಬೊಳುವಾರು ಪಂಚಾಯತ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವು ಪುತ್ತೂರಿನ ಬೋರ್ಡ್ ಹೈಸ್ಕೂಲ್‍ನಲ್ಲಿ ನಡೆಯಿತು. ಪದವಿ ಶಿಕ್ಷಣವನ್ನು ಅವರು ಮಂಗಳೂರಿನ ಅಂದಿನ ಸರಕಾರಿ ಕಾಲೇಜಿನಲ್ಲಿ (ಇಂದಿನ ಯುನಿವರ್ಸಿಟಿ ಕಾಲೇಜು) ಬಿಕಾಂ ವಿಷಯವನ್ನು ಆರಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡು ಪೂರೈಸಿದರು. ಕೆ.ಸಿ. ನಾಯ್ಕ್ ಅವರು ತಮ್ಮ ಕಾಲೇಜು ವ್ಯಾಸಂಗ ನಡೆಸುತ್ತಿದ್ದಾಗಲೇ ತಾನೊಬ್ಬ ಉದ್ಯಮಿಯಾಗಬೇಕೆಂಬ ಕನಸು ಕಂಡವರು. ಅಂತೆಯೇ ತನ್ನ ಕಾಲೇಜು ವ್ಯಾಸಂಗ ಪೂರೈಸುವ ಮೊದಲೇ ಒಂದು ಸಾರಿಗೆ ವಾಹನ (ಲಾರಿಯ) ಒಡೆಯರಾಗಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದರು. ಕಾಲೇಜು ವ್ಯಾಸಂಗ ಮುಗಿಸಿದ ತಕ್ಷಣ ಉದ್ಯಮವನ್ನು ಬಲಪಡಿಸುವತ್ತ ಹೆಜ್ಜೆ ಇಟ್ಟು ಹಲವಾರು ಸಾರಿಗೆ ವಾಹನವನ್ನು ಖರೀದಿಸಿ ಆ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡರು. ವಿಭಿನ್ನ ಚಿಂತನೆಯ ವಿಶೇಷ ಕಾರ್ಯ ಯೋಜನೆಗಳಿಂದ ಶಿಸ್ತುಬದ್ಧವಾಗಿ ಅವರ ಸಾರಿಗೆ ಉದ್ಯಮ ಬೆಳೆಯತೊಡಗಿತು. ಅರಣ್ಯದಲ್ಲಿ ಮರ ಸಾಗಣಿಕೆಯ ಗುತ್ತಿಗೆಯನ್ನು ಪಡೆದು ಕಠಿಣ ಪರಿಶ್ರಮದಿಂದ ಸಾರಿಗೆ ಉದ್ಯಮವನ್ನು ಅಭಿವೃದ್ಧಿಪಡಿಸಿದರು. ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಕೆ.ಇ.ಬಿ. ಮುಂತಾದ ಸರಕಾರಿ ಸಂಸ್ಥೆಗಳ ಗುತ್ತಿಗೆಯನ್ನು ಪಡೆದು ಸಾರಿಗೆ ಉದ್ಯಮದಲ್ಲಿ ಯಶಸ್ವಿಯಾಗಿ ಮುನ್ನಡೆದರು. ಮುಂದೆ ಬೆಳೆಯುತ್ತಾ ಬಸ್ಸೊಂದನ್ನು ಖರೀದಿಸುವ ಮೂಲಕ ಸಾರ್ವಜನಿಕ ಸಾರಿಗೆ ಉದ್ಯಮವನ್ನು ಪ್ರವೇಶಿಸಿದರು. ಬಳಿಕ ಹಲವಾರು ಬಸ್‍ಗಳ ಮಾಲಕರಾಗಿ ಈ ಉದ್ಯಮದಲ್ಲಿಯೂ ಅವರು ಯಶಸ್ವಿಯಾದರು. ಅವರ ಮಹಾಬಲೇಶ್ವರ ಬಸ್ ಸರ್ವಿಸ್ ರಾಷ್ಟ್ರಾದ್ಯಂತ ಸಂಚರಿಸಿ ಸೇವೆ ನೀಡುತ್ತಾ ಹೆಸರುವಾಸಿಯಾಯಿತು.

ತಮ್ಮ ಉದ್ಯಮಶೀಲತೆಯ ಪ್ರಯತ್ನದ ಫಲವಾಗಿ ಕರ್ನಾಟಕ ಸರಕಾರದ ಅಬಕಾರಿ ಇಲಾಖೆಯ ಗುತ್ತಿಗೆ ಪಡೆದು ಅಬಕಾರಿ ವ್ಯವಹಾರಗಳನ್ನು ನಡೆಸಿದರು. ಆದರೆ ತನ್ನ ತತ್ತ್ವನಿಷ್ಠೆಯ ಆತ್ಮಸಾಕ್ಷಿಗೆ ಈ ಉದ್ಯಮ ಸೂಕ್ತವಲ್ಲವೆಂದು ಮನಗಂಡು ಅದರಿಂದ ದೂರ ಸರಿದರು. ಜೊತೆಯಲ್ಲಿಯೇ ಕೇಸಿಯನ್ ಸೇಲ್ಸ್ ಕಾರ್ಪೊರೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಪ್ಲೈವುಡ್ ಸಗಟು ಮಾರಾಟದ ವ್ಯವಹಾರದಲ್ಲಿ ತೊಡಗಿ ಯಶಸ್ವಿಯಾದರು. 

ಬಳಿಕ 1973ರಲ್ಲಿ ಸಿಂಡಿಕೇಟ್ ಬ್ಯಾಂಕಿನ ಸಲಹೆ ಸೂಚನೆ ಮೇರೆಗೆ ಮಂಗಳೂರಿನ ಕುಗ್ರಾಮ ಶಕ್ತಿನಗರದಲ್ಲಿ ಸುಮಾರು 19 ಎಕ್ರೆ ಸ್ಥಳವನ್ನು ಖರೀದಿಸಿದರು. ಅಲ್ಲಿ ಅವರು ಹೊಸದೊಂದು ರಬ್ಬರ್ ಉದ್ಯಮವನ್ನು ಪ್ರಾರಂಭಿಸಿದರು. ‘ಕೆನರಾ ರಬ್ಬರ್ ಪ್ರೋಡಕ್ಟ್ಸ್ ಪ್ರೈ.ಲಿ. ಎಂಬ ಈ ಸಂಸ್ಥೆ ಅತೀ ಶೀಘ್ರವಾಗಿ ಬೆಳೆಯಲಾರಂಭಿಸಿ ಟಯರ್ ರಿಸೋಲಿಂಗ್ ರಬ್ಬರನ್ನು ಉತ್ಪಾದಿಸಿ ರಾಷ್ಟ್ರದ ಬಹುತೇಕ ಸಾರಿಗೆ ಸಂಸ್ಥೆಗಳಿಗೆ ಸರಬರಾಜು ಮಾಡುತ್ತಾ ಹೆಸರಾಂತ ಎಂ.ಆರ್.ಎಫ್, ಸಿಯಟ್ ಮುಂತಾದ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಜಯಶೀಲರಾಗಿ ಉತ್ತಮ ಹೆಸರನ್ನು ಗಳಿಸಿತು. ಮುಂದೆ ಆ ಸಂಸ್ಥೆಯ ಹೆಸರು ಕ್ಯಾನ್‍ಟ್ರ್ರೆಡ್ಸ್ ಪ್ರೈ. ಲಿ. ಎಂದು ಬದಲಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ದೇಶಾದ್ಯಂತ ಹತ್ತಕ್ಕೂ ಹೆಚ್ಚು ಮಾರಾಟ ಶಾಖೆಗಳನ್ನು ಹೊಂದಿ ಯಶಸ್ವಿಯಾಯಿತು. ತನ್ನ ಯಶಸ್ವೀ ಉದ್ಯಮಶೀಲತೆಗೆ ಕೇಂದ್ರ ಸರಕಾರ ನೀಡುವ Self Made Man ‘ಉದ್ಯೋಗಪತ್ರ’ ಪ್ರಶಸ್ತಿಯನ್ನು ಅವರು ಅಂದಿನ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯವರಿಂದ ಸ್ವೀಕರಿಸಿದರು. ಬಳಿಕ ಕೆಲವು ಸರಕಾರೀ ಧೋರಣೆಗಳು ಈ ಉದ್ಯಮಕ್ಕೆ ಹೊಂದಿಕೆ ಬಾರದೆ ನಷ್ಟವನ್ನು ಅನುಭವಿಸಬೇಕಾಯಿತು. ಜೊತೆಯಲ್ಲಿ ಸರೋಶ್ ಟೆಕ್ನಿಕಲ್ ಸರ್ವಿಸಸ್  ಎಂಬ ಉದ್ಯಮ ಸೇವಾ ಸಂಸ್ಥೆ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ರಬ್ಬರ್ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಾ ಹೆಸರುವಾಸಿಯಾಯಿತು. ಈ ಸಂಸ್ಥೆಗೆ ರಾಜ್ಯದ ವಾಣಿಜ್ಯ ರಫ್ತು ಪ್ರಶಸ್ತಿಗಳೂ ಕೂಡಾ ದೊರೆಯಿತು.

ಕೆ.ಸಿ. ನಾಯ್ಕ್ ರವರು ಪ್ರಥಮವಾಗಿ 1989 ರಲ್ಲಿ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದರು. ನಗರದ ಕೇಂದ್ರ ಭಾಗವಾದ ಮಹಾವೀರ ಸರ್ಕಲ್ ಬಳಿ ಪೆಂಟಗಾನ್ ಎಂಬ ತಾರಾಮೌಲ್ಯದ ಹೋಟೆಲನ್ನು ಪ್ರಾರಂಭಿಸಿದರೂ ಈ ಉದ್ಯಮದಲ್ಲಿ ಮುಂದುವರಿಯದೆ ಇತರರಿಗೆ ಹಸ್ತಾಂತರಿಸಿದರು.

1992 ರಲ್ಲಿ ಕೆ.ಸಿ. ನಾಯ್ಕ್ ಅವರು ಕಟ್ಟಡ ನಿರ್ಮಾಣ ಉದ್ಯಮವನ್ನು ಪ್ರಾರಂಭಿಸಿದರು. ಹಾಗೂ ಆ ಉದ್ಯಮದಲ್ಲಿ ಅತ್ಯಂತ ಯಶಸ್ವಿಯಾದರು. ಅವರು ಆರಿಸಿಕೊಂಡ ವಿಭಾಗ ವಸತಿ ಸಮುಚ್ಛಯ ನಿರ್ಮಾಣ. ಅವರು ಮಂಗಳೂರು ನಗರದಲ್ಲಿ ಸ್ಥಾಪಿಸಿದ ಮಹಾಬಲೇಶ್ವರ ಪ್ರೊಮೋಟರ್ಸ್ ಮತ್ತು ಬಿಲ್ಡರ್ಸ್ ಸಂಸ್ಥೆ ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿ ತನ್ನ ಕಾರ್ಯಕ್ಷೇತ್ರವನ್ನು ಬೆಂಗಳೂರು ನಗರಕ್ಕೂ ವಿಸ್ತರಿಸಿ ಅಲ್ಲಿಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದಿಗೆ ಈ ಸಂಸ್ಥೆ ನಿರ್ಮಿಸಿದ ವಸತಿ ಸಮುಚ್ಛಯಗಳ ಸಂಖ್ಯೆ 35 ಕ್ಕೂ ಮಿಕ್ಕಿದೆ. ಜೊತೆಗೆ ಶಕ್ತಿನಗರದಲ್ಲಿ ಸ್ವತಂತ್ರ ಮನೆಗಳ ನಿವೇಶನಗಳನ್ನೂ ಮಾಡುವುದರ ಮೂಲಕ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಕ್ಲಾಸಿಕ್ ವಿಲೇಜ್ ಎಂಬ ಹೆಸರಿನ ಬಡಾವಣೆಯನ್ನು ನಿರ್ಮಾಣ ಮಾಡಿ 120ಕ್ಕೂ ಹೆಚ್ಚು ಸ್ವತಂತ್ರ ಮನೆಗಳಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಶಾಂತ ಪರಿಸರದಲ್ಲಿ ನಿವೇಶನಗಳನ್ನು ಒದಗಿಸುತ್ತಿದ್ದಾರೆ. ಸುಮಾರು ಹತ್ತಕ್ಕೂ ಮಿಕ್ಕಿದ ವಸತಿ ಸಮುಚ್ಚಯ ಯೋಜನೆಗಳು ಕಾರ್ಯರೂಪದಲ್ಲಿವೆ. ಈ ಎಲ್ಲಾ ಪ್ರಯತ್ನದ ಮೂಲಕ ಸುಮಾರು 2000 ಜನರಿಗೆ ಉದ್ಯೋಗವನ್ನು ನೀಡುವುದರ ಮೂಲಕ ಬಡ ಕುಟುಂಬಗಳಿಗೆ ಆದಾರವಾದರು.

ಕೆ.ಸಿ. ನಾಯ್ಕ್ ಅವರು ಎಪ್ರಿಲ್ 30, 2007 ರಲ್ಲಿ ಶಕ್ತಿನಗರದಲ್ಲಿ ಐದಂತಸ್ತಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನವನ್ನು ನಿರ್ಮಿಸಿ ಸಾರ್ವಜನಿಕರಿಗಾಗಿ ಲೋಕಾರ್ಪಣಗೊಳಿಸಿದರು.

ಶಕ್ತಿನಗರದಲ್ಲಿ ದೇವಸ್ಥಾನವನ್ನು ಕಟ್ಟಿ ಟ್ರಸ್ಟ್ ಗಳನ್ನು ರಚಿಸಿ ತನ್ಮೂಲಕ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಖ್ಯಾತ ಹೃದಯ ರೋಗ ತಜ್ಞರಾದ ಡಾ. ಎ.ವಿ. ಶೆಟ್ಟಿ, ಖ್ಯಾತ ನರರೋಗ ತಜ್ಞರಾದ ಡಾ. ಕೆ.ವಿ. ದೇವಾಡಿಗ ಅವರನ್ನೊಳಗೊಂಡ ಟ್ರಸ್ಟ್ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಗೌರವ ಸಲಹೆಗಾರರಾಗಿ ಪ್ರೊ. ಎಂ.ಬಿ. ಪುರಾಣಿಕ್, ಡಾ. ಪಿ. ಅನಂತಕೃಷ್ಣ ಭಟ್, ಕ್ಯಾ. ಗಣೇಶ್ ಕಾರ್ಣಿಕ್ ಇವರೊಂದಿಗಿದ್ದು ಸಹಕರಿಸುತ್ತಿದ್ದಾರೆ. 

ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ಸಭಾಭವನವನ್ನು ನಿರ್ಮಿಸಿ ಅದರಲ್ಲಿ ಬಂದ ಉತ್ಪತ್ತಿಯನ್ನು ದೇವಸ್ಥಾನ ನಿರ್ವಹಣೆಯ ಖರ್ಚಿಗಾಗಿ ಉಪಯೋಗಿಸಿ ಮಿಕ್ಕಿದ ಹಣವನ್ನು ಸಮಾಜಸೇವೆಗಾಗಿ ವಿನಿಯೋಗಿಸುತ್ತಿದ್ದಾರೆ. ತೀರಾ ಹಿಂದುಳಿದ ಪ್ರದೇಶವಾದ ಶಕ್ತಿನಗರದ ನಿವಾಸಿಗಳಿಗೆ ಹಲವಾರು ನಾಗರಿಕ ಸೌಲಭ್ಯ ದೊರಕುವಂತೆ ಮಾಡುವಲ್ಲಿ ಕೆ.ಸಿ. ನಾಯ್ಕ್ ಅವರು ಶ್ರದ್ಧಾಪೂರ್ವಕ ಕಾರ್ಯ ನಿರ್ವಹಿಸಿರುತ್ತಾರೆ. ಈ ಪ್ರದೇಶವದ ಸರ್ವತೋಮುಖ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರಿಗೆ ಸುಲಭ ಸಾಧ್ಯವಾಗುವಂತೆ ಎರಡು ಸಾವಿರಕ್ಕೂ ಮಿಕ್ಕಿದ ಗೃಹ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಸ್ತೆಗಳ ಅಭಿವೃದ್ಧಿ, ಹೊಸ ರಸ್ತೆಗಳ ನಿರ್ಮಾಣ, ನೀರು, ವಿದ್ಯುತ್ ಮುಂತಾದ ನಾಗರಿಕ ಸೌಲಭ್ಯ ಮುಂತಾದವುಗಳು ಶಕ್ತಿನಗರದ ಮನೆಮನೆಗಳಿಗೂ ತಲಪುವಂತೆ ಪ್ರಯತ್ನ ನಡೆಸುತ್ತಿದ್ದಾರೆ. ಪರಿಸರದ ದೇವಸ್ಥಾನ, ದೈವಸ್ಥಾನ, ನಾಗಬನಗಳ ಜೀರ್ಣೋದ್ಧಾರದಲ್ಲಿ ಆರ್ಥಿಕ ಹಾಗೂ ಸರ್ವ ರೀತಿಯ ಸಹಕಾರಗಳನ್ನು ಒದಗಿಸುತ್ತಿದ್ದಾರೆ.

ಸ್ಥಳೀಯ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ, ಶಾಲಾ ಮಕ್ಕಳ ಉಪಯೋಗಕ್ಕಾಗಿ ಶಾಲಾ ವಾಹನ ವಿತರಣೆ, ಅಂಗನವಾಡಿ ಶಾಲೆಗಳಿಗೆ ದೇಣಿಗೆ, ಹೊಸ ಅಂಗನವಾಡಿ ಸ್ಥಾಪನೆ, ಆವರಣಗೋಡೆ ನಿರ್ಮಾಣ, ಸ್ಥಳೀಯ ಸರಕಾರಿ ಶಾಲೆಗಾಗಿ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ, ಸಾವಿರಾರು ಲೋಡು ಮಣ್ಣು ಸುರಿದು ನೆಲ ಸಮತಟ್ಟುಗೊಳಿಸಿ ಕ್ರೀಡಾಂಗಣ ನಿರ್ಮಾಣ ಮಾಡಿರುವುದು ಇತ್ಯಾದಿ ಕಾರ್ಯಗಳನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ನಡೆಸಿದ್ದಾರೆ.

ನಗರಪಾಲಿಕೆಯಲ್ಲಿ ಮಂಜೂರಾದ ಹೊಸ ಒಳ ಮಾರ್ಗಗಳನ್ನು ಕೆ.ಸಿ. ನಾಯ್ಕ್ ರವರು ಸ್ವಂತ ಖರ್ಚಿನಿಂದ ನಿರ್ಮಾಣ ಮಾಡಿಸಿದ್ದಾರೆ. ಶಕ್ತಿನಗರದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡು ಈ ಪರಿಸರದ ಬಡತನ ರೇಖೆಯಿಂದ ಕೆಳಗಿರುವವರನ್ನೆಲ್ಲಾ ಉದ್ಧಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರ್ಥಿಕ ದುರ್ಬಲರಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ ವಿತರಣೆ, ಅಕ್ಕಿ, ಬಟ್ಟೆಗಳ ವಿತರಣೆ, ಸ್ಥಳೀಯ ಶಾಲಾ ಮಕ್ಕಳಿಗೆ ಅನ್ನದಾನ, ವಿವಿಧ ಧಾರ್ಮಿಕ ಕೇಂದ್ರಗಳಿಗೆ ಆರ್ಥಿಕ ಸಹಾಯ ಮುಂತಾದ ಸಮಾಜಮುಖೀ ಕಾರ್ಯಗಳು ಇವರ ಟ್ರಸ್ಟ್ ವತಿಯಿಂದ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುತ್ತಿದ್ದಾರೆ. ಅಫಘಾತ ಸಂಭವಿಸಿದ ಬಡವರ ಔಷಧ ವೆಚ್ಚವನ್ನು ಭರಿಸುತ್ತಿದ್ದಾರೆ.

ದೇವಸ್ಥಾನದ ವತಿಯಿಂದ ಉಚಿತ ಯೋಗ ತರಬೇತಿ ಶಿಬಿರ, ಮಕ್ಕಳಿಗಾಗಿ ‘ಸಂಸ್ಕೃತಿ-ಸಂಸ್ಕಾರ’ಗಳ ಶಿಬಿರ, ಚಿತ್ರಕಲೆ, ಸಂಗೀತ, ಭಗವದ್ಗೀತೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಗೋಶಾಲೆಯನ್ನು ನಿರ್ವಹಿಸುತ್ತಿದ್ದು ಗೋಸಂತತಿಯ ಅಭಿವೃದ್ಧಿಯ ಕಾರ್ಯನಡೆಯುತ್ತಿದೆ.

ಸಂತ್ರಸ್ತರಿಗಾಗಿ ಸ್ಪಂದನ: 2009ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಭೀಕರ ನೆರೆಯಿಂದಾಗಿ ಸಂತ್ರಸ್ತರಾದವರಿಗೆ ಸಹಾಯಕ್ಕಾಗಿ ಸೇವಾ ಭಾರತಿ ಕರ್ನಾಟಕ (ನೆಲೆ) ಇದರ ಮಂಗಳೂರು ವಿಭಾಗದ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದವರಿಗೆ ಬಟ್ಟೆ ಬರೆ, ಆಹಾರವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ಕಳುಹಿಸಿದ್ದಾರೆ. ಸಂತ್ರಸ್ತರಿಗಾಗಿ ಹಮ್ಮಿಕೊಂಡ ಮನೆ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿರುತ್ತಾರೆ. ಆ ಪ್ರದೇಶಕ್ಕೆ ತೆರಳಿ ಸುಮಾರು 350ರಷ್ಟು ಮನೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಹಾಗೂ ಮಾರ್ಗದರ್ಶನ ಮಾಡಿದ್ದಾರೆ.

ಕರ್ನಾಟಕ ರಾಜ್ಯಮಟ್ಟದ ಕಟ್ಟಡ ನಿರ್ಮಾಣಗಾರರ ಸಂಘಟನೆ ಕ್ರೆಡೈಯನ್ನು ಮಂಗಳೂರಿಗೂ ಬರುವಂತೆ ಮಾಡಿ ಅದರ ಪ್ರಥಮ ಅಧ್ಯಕ್ಷರಾಗಿ ಸಂಘಟನೆ ಇಲ್ಲದೆ ಹಂಚಿ ಹೋಗಿದ್ದ ಕಟ್ಟಡ ನಿರ್ಮಾಣಗಾರರನ್ನು ಒಗ್ಗೂಡಿಸಿ ಜನಸಾಮಾನ್ಯರಿಗೂ ನಿಲುಕುವಂತಹ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಹಾದಿಯನ್ನು ನಿರ್ಮಿಸಿದ್ದಾರೆ.

ಕಟ್ಟಡ ನಿರ್ಮಾಣಗಾರರ ಒಕ್ಕೂಟ- ಕ್ರೆಡೈ ವತಿಯಿಂದ ನಡೆದ Statecan 2012ರ ಅಧ್ಯಕ್ಷರಾಗಿ ಕಟ್ಟಡ ನಿರ್ಮಾಣಗಾರರ ರಾಜ್ಯಮಟ್ಟದ ಮಹಾ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಮಾಜಿ ಸಿ ಎಂ ಜಗದೀಶ ಶೆಟ್ಟರ್ ರವರು ತಮ್ಮ ಬೆಂಬಲವನ್ನು ಸೂಚಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿನ ರೂವಾರಿ ಕೆ.ಸಿ. ನಾಯ್ಕ್ ಅವರನ್ನು ಅಭಿನಂದಿಸಿದ್ದಾರೆ. 

ನಗರದ ಹೊರವಲಯದ ಬರೀ ಒಣ ಪ್ರದೇಶವಾದ ಪಿಲಿಕುಳದಲ್ಲಿ ಗಾಲ್ಫ್ ಕ್ರೀಡಾ ಮೈದಾನವನ್ನು ನಿರ್ಮಿಸಿ ಗಾಲ್ಫ್ ಕ್ರೀಡೆಗೆ ಉತ್ತೇಜನ ನೀಡಿ ನಗರದ ಅಭಿವೃದ್ಧಿಯತ್ತಲೂ ಮಹತ್ವದ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಗಾಲ್ಫ್ ಕ್ಲಬ್‍ನ ಮುಖ್ಯಸ್ಥರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಗಾಲ್ಫ್ ಕ್ಲಬ್ ವತಿಯಿಂದ ಬಹಳಷ್ಟು ಸಮಾಜಸೇವೆ ಸಲ್ಲುವಂತೆ ಕಾರ್ಯ ನಿರ್ವಹಿಸಿದ್ದಾರೆ.

ಧಾರ್ಮಿಕ ಕ್ಷೇತ್ರ: 1. ತಮ್ಮ ಹುಟ್ಟೂರಾದ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ, ಇಲ್ಲಿ ಶ್ರೀ ಪಾರ್ಥಸಾರಥಿ ಗುಡಿ ಸ್ವಂತ ಖರ್ಚಿನಲ್ಲಿ ನಿರ್ಮಾಣ, ತೀರ್ಥ ಕೆರೆಯ ಜೀರ್ಣೋದ್ಧಾರ, ಧ್ವಜ ಸ್ತಂಭ, ರಥ ನಿರ್ಮಾಣ ಯೋಜನೆ, ಆರ್ಥಿಕ ಸಹಾಯ ಹಾಗೂ ವಸ್ತು ರೂಪದ ಸಹಾಯ, ಮುಂಚೂಣಿಯಲ್ಲಿದ್ದು ಸರ್ವ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು.

2. ತಮ್ಮ ಮೂಲ ಹಳ್ಳಿಯ ದೈವಸ್ಥಾನದ ಜೀರ್ಣೋದ್ಧಾರ, ಸಂಘಟನೆ, ನಿತ್ಯ ನೈಮಿತ್ತಿಕಗಳ ಸುವ್ಯವಸ್ಥೆ.

3. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೊಕ್ತೇಸರರಾಗಿ 8 ವರ್ಷಗಳ ಕಾಲ ಕಾರ್ಯ ನಿರ್ವಹಣೆ, ಸಂಘಟನೆ, ಜೀರ್ಣೋದ್ಧಾರ ಕಾರ್ಯದಲ್ಲಿ ಆರ್ಥಿಕ ಸಹಾಯ.

4. ತಾವು ಸ್ವಂತ ಖರ್ಚಿನಿಂದ ಪುತ್ತೂರಿನ ಮಂಜಲಪಡ್ಪಿನಿಂದ ಕೊಡಿಪಾಡಿಯ ವರೆಗೆ ನಿರ್ಮಿಸಿದ ಮಾರ್ಗ ಇಂದು ಡಾಮರೀಕರಣಗೊಂಡು ಸಾರ್ವಜನಿಕ ಮಾರ್ಗವಾಗಿದೆ.

4. ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿ ಶ್ರೀ ದುರ್ಗಾ ಗುಡಿಯ ಮಾಡಿನ ತಾಮ್ರದ ಹೊದಿಕೆಯ ಸೇವೆ, ಶ್ರೀ ಕದ್ರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸರ್ವ ರೀತಿಯಲ್ಲಿ ತೊಡಗಿಸಿಕೊಳ್ಳುವಿಕೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವುದನ್ನು ಅಂದಿನ ಶೃಂಗೇರಿ ಜಗದ್ಗುರುಗಳು ಬಹಳಷ್ಟು ಮೆಚ್ಚುಗೆ ಸೂಚಿಸಿರುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಉಸ್ತುವಾರಿ ಕಾರ್ಯನಿರ್ವಹಿಸಿದ್ದಾರೆ.

5. ಜಿಲ್ಲೆಯ ಹಲವಾರು ದೇವಾಲಯ, ದೈವಾಲಯ, ಶಿಕ್ಷಣಕೇಂದ್ರ, ಭಜನಾಮಂದಿರ, ಸಾರ್ವಜನಿಕ ಕೇಂದ್ರಗಳಿಗೆ ಸಹಾಯ

•  ಶಕ್ತಿನಗರದ ಸರ್ವತೋಮುಖ ಅಭಿವೃದ್ಧಿಯ ಕಾರ್ಯಯೋಜನೆಯೊಂದಿಗೆ ಕಾರ್ಯ ನಿರ್ವಹಣೆ. ವರ್ಷಂಪ್ರತಿ 200ಕ್ಕೂ ಮಿಕ್ಕಿದ ಕುಟುಂಬದ ಆರ್ಥಿಕ ದುರ್ಬಲರಿಗೆ ಆರೋಗ್ಯವಿಮಾ ಕಾರ್ಡ್ ವಿತರಣೆ

•   ಸ್ಥಳೀಯ ಬಡವರಿಗೆ ಅಕ್ಕಿ, ಬಟ್ಟೆ ವಿತರಣೆ

• ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

• ಸರಕಾರಿ ಶಾಲಾ ಮಕ್ಕಳಿಗಾಗಿ ಶಾಲಾ ವಾಹನ ವಿತರಣೆ

• ಸ್ಥಳೀಯ ಮಾನಸಿಕ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಗೆ ಅನ್ನದಾನ

• ಅಂಗನವಾಡಿಗಳ ಕಟ್ಟಡ ನಿರ್ಮಾಣ

• ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆ ನಿರ್ಮಾಣ

• ಸರಕಾರಿ ಶಾಲೆಗೆ ಕ್ರೀಡಾಂಗಣ ನಿರ್ಮಾಣ

• ದೈವಸ್ಥಾನಗಳ, ನಾಗಬನಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಹಾಗೂ ಕಟ್ಟಡ ನಿರ್ಮಾಣ ವಸ್ತು ರೂಪದ ಸಹಾಯ

• ನೂತನ ದೇವಸ್ಥಾನಗಳಿಗೆ ಅನ್ನದಾನಕ್ಕಾಗಿ ಹೊರೆಕಾಣಿಕೆಯ ಸೇವೆ

• ಸ್ವಂತ ನಿರ್ಮಾಣದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನ್ನದಾನ

• ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ  ರಾಜ್ಯಮಟ್ಟದಲ್ಲಿ ಅತ್ಯಂತ ಮಹತ್ವದ ಲೋಕ ಕಲ್ಯಾಣಾರ್ಥವಾಗಿ ಕೋಟಿನಾಮಾರ್ಚನೆಯ ಬೃಹತ್ ಸಂಯೋಜನೆ, ಸಂಪೂರ್ಣ ಯಶಸ್ಸು.

ಸಾಮಾಜಿಕ ಜವಾಬ್ದಾರಿಗಳು :

•      ಆಡಳಿತ ನಿರ್ದೇಶಕರು – ಮಹಾಬಲೇಶ್ವರ ಸಮೂಹ ಸಂಸ್ಥೆಗಳು

•      ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರು

•      ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮ್ಯಾನೇಜ್‍ಮೆಂಟ್ ಕಾಲೇಜಿನ ಉಪಾಧ್ಯಕ್ಷರು

•      ಕ್ರೆಡೈ ಮಂಗಳೂರು ವಿಭಾಗದ ಮಾಜಿ ಅಧ್ಯಕ್ಷರು

•      ಮಂಗಳೂರು ಗಾಲ್ಫ್ ಕ್ಲಬ್‍ನ ಮಾಜಿ ಮುಖ್ಯಸ್ಥರು

•      ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸ್ಥಾಪಕ ಸದಸ್ಯರು.

•      ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಕಾರ್ಯದರ್ಶಿ

•      ಆಫೀಸರ್ಸ್ ಕ್ಲಬ್‍ನ ಸದಸ್ಯ

•      ಶ್ರೀ ಗುರುವನ ಶ್ರೀದುರ್ಗಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು.

•      ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ

•      ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರು

•      ಕೊಡಿಪಾಡಿ ಧೂಮಾವತಿ, ಕಲುರ್ಟಿ, ಪಂಜುರ್ಲಿ ದೈವಸ್ಥಾನದ ಸ್ಥಾಪಕಾಧ್ಯಕ್ಷರು

•      ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹಿಂದಿನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು.

•      ಶಕ್ತಿನಗರ ಶ್ರೀ ವೈದ್ಯನಾಥ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು.

•      ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು.

•      ಸಂಸ್ಥಾಪಕರು ಶಕ್ತಿ ಎಜ್ಯುಕೇಶನ್ ಟ್ರಸ್ಟ್, ಮಂಗಳೂರು.

ಶಕ್ತಿನಗರದ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಹಮ್ಮಿಕೊಂಡಿದ್ದು, ನೂತನ ರಸ್ತೆಗಳ ನಿರ್ಮಾಣ, ಅಂಗನವಾಡಿ ಶಾಲೆಗಳು, ಆರ್ಥಿಕವಾಗಿ ಹಿಂದುಳಿದವರಿಗಾಗಿ ಉಚಿತ ವೈದ್ಯಕೀಯ ಸೇವೆ, ವಾಣಿಜ್ಯ ಕೇಂದ್ರಗಳು, ಆಸ್ಪತ್ರೆಗಳು, ಶ್ರೀಕ್ಷೇತ್ರದ ವತಿಯಿಂದ ನಿತ್ಯ ಅನ್ನದಾನಕ್ಕಾಗಿ ಅನ್ನಛತ್ರ, ಭಾರತೀಯ ಗೋವುಗಳ ಸಂತತಿಯ ರಕ್ಷಣೆ ಅಭಿವೃದ್ಧಿಗಾಗಿ ಗೋಶಾಲೆ, ಸಮಗ್ರ ವೇದಶಾಖೆಗಳ ಶಿಕ್ಷಣಕ್ಕಾಗಿ ವೇದಪಾಠಶಾಲೆ, ಯೋಗ ತರಬೇತಿ ಕೇಂದ್ರ, ಸರ್ವ ಸುಸಜ್ಜಿತ ಗ್ರಂಥಾಲಯ, ಸಂಶೋಧನೆ ನಡೆಸುವವರಿಗೆ ಪೂರಕವಾದ ಮಾಹಿತಿ ನೀಡಲು ಸಮರ್ಥವಾಗುವಂತೆ ರಚನೆ. ಧರ್ಮದ ಶ್ರದ್ಧೆಗೆ ಪೂರಕವಾದ ಆಂಜನೇಯನ ಬೃಹತ್ ವಿಗ್ರಹ, ಉದ್ಯಾನವನಗಳ ನಿರ್ಮಾಣ, ಹಸಿರು ಪರಿಸರ ನಿರ್ಮಾಣ, ಶಕ್ತಿನಗರವನ್ನು ರಾಷ್ಟ್ರದಲ್ಲಿಯೇ ಒಂದು ಮಾದರಿ ನಗರವನ್ನಾಗಿ ಮಾಡುವ ಯೋಜನೆ ಅವರಿಗೆ.

2016ನೇ ಜೂನ್ 1ರಿಂದ ಶ್ರೀ ಗೋಪಾಲಕೃಷ್ಣ ಪ್ರೀ ಸ್ಕೂಲ್ (ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ) ದೇವಸ್ಥಾನದ ಸಮುಚ್ಚಯದಲ್ಲಿಯೇ ಪ್ರಾರಂಭವಾಗಿರುತ್ತದೆ. ಇದರ ಮುಂದುವರಿದ ಭಾಗವಾಗಿ ಶಕ್ತಿ ಎಜುಕೇಶನ್ ಟ್ರಸ್ಟ್ ಎಂಬ ವಿದ್ಯಾಸಂಸ್ಥೆಯನ್ನು ನೋಂದಾಯಿಸಲಾಗಿದ್ದು ಅದರ ವತಿಯಿಂದ 1ನೇ ತರಗತಿಯಿಂದ ಪದವಿ ಪೂರ್ವ ತರಗತಿವರೆಗಿನ  ‘ಶಕ್ತಿ ವಸತಿಯುತ ವಿದ್ಯಾಲಯ’ವನ್ನು ಪ್ರಾರಂಭಿಸಲಾಗಿದೆ.

2015ರಲ್ಲಿ ಶ್ರೀ ಕೆ.ಸಿ ನಾಯ್ಕ್ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ ಗೈದರು ಶಕ್ತಿ ಎಜ್ಯುಕೇಶನ್ ಟ್ರಸ್ಟ್(ರಿ) ಮೂಲಕ. ಶಕ್ತಿ ನಗರದಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣಕ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News