ಆರೋಪಿ ಆದಿತ್ಯರಾವ್ ವೆನ್ಲಾಕ್ ಆಸ್ಪತ್ರೆಗೆ ದಾಖಲು: ಬುಧವಾರ ನಡೆಯದ ಪರೇಡ್

Update: 2020-02-26 13:36 GMT

ಮಂಗಳೂರು, ಫೆ.26: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಆದಿತ್ಯರಾವ್ ಅಸೌಖ್ಯಕ್ಕೀಡಾಗಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಬುಧವಾರ ನಡೆಯಬೇಕಾಗಿದ್ದ ಪರೇಡ್ ಮುಂದೂಡಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತಂಡ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಈ ಪೈಕಿ ಆರೋಪಿಯು ಸ್ಪೋಟಕವಿರಿಸಿ, ಪರಾರಿಯಾದ ದಿನ ಆತನನ್ನು ಪ್ರತ್ಯಕ್ಷವಾಗಿ ಕಂಡಿದ್ದ 15 ಮಂದಿಯ ಎದುರು ಬುಧವಾರ ಪರೇಡ್ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಮಂಗಳೂರು ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿತ್ತು.
ಬುಧವಾರ ಪರೇಡ್ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಈ ಮಧ್ಯೆ ಆದಿತ್ಯರಾವ್ ಮಲೇರಿಯಾದಿಂದ ಬಳಲುತ್ತಿದ್ದು, ಎರಡು ದಿನದ ಹಿಂದೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಹಾಗಾಗಿ ಬುಧವಾರದ ಪರೇಡ್ ಮುಂದೂಡಲಾಗಿದೆ.

ಜ.20ರಂದು ಆದಿತ್ಯ ರಾವ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ಪೋಟಕವಿರಿಸಿ ವಾಪಸ್ ಹೋದ ವೇಳೆ ಆತನನ್ನು ಕಂಡಿದ್ದ 15 ಮಂದಿಯನ್ನೂ ನ್ಯಾಯಾಧೀಶರ ಎದುರು ಹಾಜರಪಡಿಸಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದು, ಈ ಪ್ರಕ್ರಿಯೆಗೆ ಕೂಡ ಸಿದ್ಧತೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News