ಸಾಧು ಪಾಣಾರ, ರುಕ್ಮಯ್ಯ ಗೌಡ ಸೇರಿ 30 ಮಂದಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

Update: 2020-02-26 14:19 GMT

ಉಡುಪಿ, ಫೆ.26: ಉಡುಪಿ ಅಲೆವೂರಿನ ಭೂತಕೋಲ ನರ್ತಕ ಸಾಧು ಪಾಣಾರ ಹಾಗೂ ದಕ್ಷಿಣ ಕನ್ನಡ ಪುದುಬೆಟ್ಟ ಗ್ರಾಮದ ಸಿದ್ಧವೇಷ ಕಲಾವಿದ ರುಕ್ಮಯ್ಯ ಗೌಡ ಸೇರಿದಂತೆ ಒಟ್ಟು 30 ಮಂದಿ ಜಾನಪದ ಕಲಾವಿದರನ್ನು ಹಾಗೂ ಇಬ್ಬರು ಜಾನಪದ ವಿದ್ವಾಂಸರನ್ನು 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಅವರು ಪ್ರಕಟಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಅಕಾಡೆಮಿಯ ಈ ವರ್ಷದ ವಾರ್ಷಿಕ ಗೌರವ ಪ್ರಶಸ್ತಿಯ ಪಟ್ಟಿಯನ್ನು ಬಿಡುದಗಡೆಗೊಳಿಸಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳ 30 ಜಾನಪದ ಕಲಾವಿದರನ್ನು ಹಾಗೂ ಇಬ್ಬರು ಜಾನಪದ ತಜ್ಞರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿದ್ದು ಎಲೆಮರೆಯ ಕಾಯಿಗಳಂತೆ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ ಕಲಾವಿದರನ್ನು ಗುರುತಿಸಿ ಈ ಆಯ್ಕೆಯನ್ನು ಮಾಡಲಾಗಿದೆ. ಹೀಗಾಗಿ ಉತ್ತರ ಕನ್ನಡದ 103 ವರ್ಷ ಪ್ರಾಯದ ಹುಸೇನಾಬಿ ಬುಡೆನ್‌ಸಾಬ್ ಸಿದ್ಧಿ ಎಂಬ ಹಿರಿಯ ಮಹಿಳೆಯನ್ನು ಸಿದ್ಧಿ ಡಮಾಮಿ ನೃತ್ಯ ಕ್ಷೇತ್ರದಲ್ಲಿ ಗುರುತಿಸಲು ಸಾಧ್ಯವಾಗಿದೆ ಎಂದವರು ಹೇಳಿದರು.

ಸ್ವಸ್ಥ ಸಮಾಜಕ್ಕಾಗಿ ಹಸಿವು, ಅವಮಾನ, ಬಡತನಗಳನ್ನು ಸಹಿಸಿಕೊಂಡು ಅಕ್ಷರ ಬಾರದೇ ಇದ್ದರೂ, ಬಾಯಿಂದ ಬಾಯಿಗೆ ನೆಲಮೂಲ ಸಂಸ್ಕೃತಿಯನ್ನು ತನ್ನ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಡ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸಲು ಹುಟ್ಟಿಕೊಂಡ ಜಾನಪದ ಅಕಾಡೆಮಿ 1980ರಿಂದ 2017ರವರೆಗೆ 9333 ಜಾನಪದ ಕಲಾವಿದರನ್ನು ಹಾಗೂ 103 ವಿದ್ವಾಂಸರು ಸೇರಿದಂತೆ ಒಟ್ಟು 1036 ಮಂದಿಯನ್ನು ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಬಿ.ಮಂಜಮ್ಮ ಜೋಗತಿ ತಿಳಿಸಿದರು.

ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯು 25,000ರೂ.ನಗದು ಮೊತ್ತವನ್ನು ಹೊಂದಿದ್ದರೆ, ಇಬ್ಬರು ತಜ್ಞರಿಗೆ ನೀಡುವ ಪ್ರಶಸ್ತಿ ತಲಾ 50,000 ರೂ. ನಗದನ್ನು ಹೊಂದಿರುತ್ತದೆ. ಇದರ ಜೊತೆಗೆ ಪುರಸ್ಕೃತರಿಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲಗಳನ್ನು ನೀಡಿ ಗೌರವಿಸಲಾಗುತ್ತದೆ.

ಮುಂದೆ ಎಪ್ರಿಲ್-ಮೇ ತಿಂಗಳಲ್ಲಿ ಬಳ್ಳಾರಿ ಅಥವಾ ಬೆಂಗಳೂರಿನಲ್ಲಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅವರು ತಿಳಿಸಿದರು.

ಕಳೆದ ಫೆ.15ರಂದು ನಡೆದ ಕರ್ನಾಟಕ ಜಾನಪದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ 30 ಮಂದಿ ಜಾನಪದ ಕಲಾವಿದರು ಹಾಗೂ ಇಬ್ಬರು ತಜ್ಞರನ್ನು 2019ನೇ ಸಾಲಿನ ಗೌರವ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಯಿತು ಎಂದೂ ಬಿ.ಮಂಜಮ್ಮ ಜೋಗತಿ ವಿವರಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.
ಎಂ.ಗೌರಮ್ಮ, ಹಲಸೂರು ಬೆಂಗಳೂರು ನಗರ (ಜಾನಪದ ಗಾಯನ), ಲಕ್ಷ್ಮಮ್ಮ, ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ (ಭಜನೆ ಪದಗಳು), ಅಂಕನಹಳ್ಳಿ ಶಿವಣ್ಣ, ಕೂಟಗಲ್ ಹೋಬಳಿ ರಾಮನಗರ (ಪೂಜಾ ಕುಣಿತ), ಅಂಗಡಿ ವೆಂಕಟೇಶಪ್ಪ, ಮೇಮಗಲ್ ಕೋಲಾರ (ತತ್ವಪದ), ರಂಗಯ್ಯ, ಕೊಪ್ಪ ಗ್ರಾಮ, ತುಮಕೂರು ಜಿಲ್ಲೆ (ಜಾನಪದ ಗೀತೆ).

ಪಿ.ಜಿ.ಪರಮೇಶ್ವರಪ್ಪ, ಜಗಳೂರು ದಾವಣಗೆರೆ ಜಿಲ್ಲೆ(ವೀರಗಾಸೆ), ತಿಪ್ಪಣ್ಣ, ದೊಡ್ಡಸಿದ್ಧನಹಳ್ಳಿ ಚಿತ್ರದುರ್ಗ (ಗೊರವರ ಕುಣಿತ), ಮುನಿರೆಡ್ಡಿ, ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆ (ಜಾನಪದ ಗಾಯನ), ಜಿ.ಸಿ.ಮಂಜಪ್ಪ, ಕಣ್ಣೂರು ಸಾಗರ ಶಿವಮೊಗ್ಗ ಜಿಲ್ಲೆ (ಡೊಳ್ಳು ಕುಣಿತ), ಮಾದ ಶೆಟ್ಟಿ, ಹಳೇಪುರ ಗ್ರಾಮ ವೆುಸೂರು ಜಿಲ್ಲೆ (ಕಂಸಾಳೆ ಕುಣಿತ).

ಪಿ.ಜಿ.ಪರಮೇಶ್ವರಪ್ಪ, ಜಗಳೂರು ದಾವಣಗೆರೆ ಜಿಲ್ಲೆ(ವೀರಗಾಸೆ), ತಿಪ್ಪಣ್ಣ, ದೊಡ್ಡಸಿದ್ಧನಹಳ್ಳಿ ಚಿತ್ರದುರ್ಗ (ಗೊರವರ ಕುಣಿತ), ಮುನಿರೆಡ್ಡಿ, ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆ (ಜಾನಪದ ಗಾಯನ), ಜಿ.ಸಿ.ಮಂಜಪ್ಪ, ಕಣ್ಣೂರು ಸಾಗರ ಶಿವಮೊಗ್ಗ ಜಿಲ್ಲೆ (ಡೊಳ್ಳು ಕುಣಿತ), ಮಾದ ಶೆಟ್ಟಿ, ಹಳೇಪುರ ಗ್ರಾಮ ಮೈಸೂರು ಜಿಲ್ಲೆ (ಕಂಸಾಳೆ ಕುಣಿತ). ಸ್ವಾಮಿ ಗೌಡ, ಪಾಂಡವಪುರ ಮಂಡ್ಯ ಜಿಲ್ಲೆ (ಬೀಸುವ ಪದಗಳು ಪುರುಷ ಕಲಾವಿದ), ಗೌರಮ್ಮ, ದೊಡ್ಡರಾಯನಪೇಟೆ ಚಾಮರಾಜನಗರ (ಸೋಬಾನೆ ಪದ), ಜೆ.ಕೆ.ರಾಮು, ವಿರಾಜಪೇಟೆ ಕೊಡಗು ಜಿಲ್ಲೆ (ಕೊಡವರ ಕುಣಿತ), ಕಪಿನಿಗೌಡ ಕೆ., ಚೆನ್ನರಾಯಪಟ್ಟಣ ಹಾಸನ ಜಿಲ್ಲೆ (ಕೋಲಾಟ), ಡಾ.ಎಚ್.ಸಿ. ಈಶ್ವರನಾಯಕ, ಕೊಣಕೆರೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ(ನಾಟಿ ವೈದ್ಯ).

ಸಾಧು ಪಾಣಾರ, ಅಲೆವೂರು ಉಡುಪಿ (ಭೂತಕೋಲ), ರುಕ್ಮಯ್ಯ ಗೌಡ, ಪುದುಬೆಟ್ಟು ಗ್ರಾಮ, ದಕ್ಷಿಣ ಕನ್ನಡ (ಸಿದ್ಧವೇಷ), ಸಂಕಮ್ಮ, ರಾಮದುರ್ಗ ಬೆಳಗಾವಿ ಜಿಲ್ಲೆ (ಸಂಪ್ರದಾಯದ ಪದ), ರುಕ್ಮಿಣಿ ಮಲ್ಲಪ್ಪ ಹರನಾಳ, ಜಮಖಂಡಿ ಬಾಗಲಕೋಟೆ (ಮದುವೆ ಹಾಡು), ಮಲ್ಲಯ್ಯ ರಾಚಯ್ಯ ತೋಟಗಂಟಿ, ಕಲಘಟಕಿ ಧಾರವಾಡ ಜಿಲ್ಲೆ (ಜಾನಪದ ಸಂಗೀತ).

ಹನುಮಂತಪ್ಪ ಧಾರವಾಡ, ಚಿಕ್ಕಲಿಂಗದಹಳ್ಳಿ ಹಾವೇರಿ (ಭಜನೆ ಕೋಲಾಟ), ನಾಗರಾಜ ನಿ ಜಕ್ಕಮ್ಮನವರ್, ನಿಲಗುಂದ ಗದಗ ಜಿಲ್ಲೆ (ಗೀಗಿ ಪದ), ನಿಂಬೆವ್ವ ಕೆಂಚಪ್ಪ ಗುಬ್ಬಿ, ಇಂಗಳೇಶ್ವರ ವಿಜಯಪುರ (ಸೋಬಾನ ಹಾಡು), ಹುಸೇನಾಬಿ ಬುಡೆನ್‌ಸಾಬ್ ಸಿದ್ಧಿ, ಹಳಿಯಾಳ ಉತ್ತರ ಕನ್ನಡ ಜಿಲ್ಲೆ (ಸಿದ್ಧಿ ಢಮಾಮಿ ನೃತ್ಯ), ಗಂಗಾಧರಯ್ಯ ಸ್ವಾಮಿ ಅಗ್ಗಿಮಠ, ಮಕ್ತಾಂಪುರ ಕಲಬುರಗಿ ಜಿಲ್ಲೆ (ಪುರುಷವಂತಿಕೆ), ತುಳಸಿರಾಮ ಭೀಮರಾವ್ ಸುತಾರ, ಭಾಲ್ಕಿ ಬೀದರ್ ಜಿಲ್ಲೆ (ಆಲದ ಎಲೆಯಿಂದ ಸಂಗೀತ), ಶಾಂತವ್ವ ಗಂಡ ಲಚಮಪ್ಪ ಲಮ್ಹಾಣಿ, ಕುಕನೂರು ಕೊಪ್ಪಳ ಜಿಲ್ಲೆ (ಲಂಬಾಣಿ ನೃತ್ಯ), ಸೂಗಪ್ಪ ನಾಗಪ್ಪ, ದೇವಸೂಗುರು ರಾಯಚೂರು ಜಿಲ್ಲೆ (ತತ್ವಪದ), ವೇಷಗಾರ ಮೋತಿ ರಾಮಣ್ಣ, ಹರಪ್ಪನಹಳ್ಳಿ ಬಳ್ಳಾರಿ ಜಿಲ್ಲೆ (ಹಗಲು ವೇಷ), ಶಿವಮೂರ್ತಿ ತನೀಕೆದಾರ, ಸುರಪುರ, ಯಾದಗಿರಿ ಜಿಲ್ಲೆ (ಗೀಗಿ ಪದ).

ವಿದ್ವಾಂಸರಿಗೆ ತಜ್ಞ ಪ್ರಶಸ್ತಿ:

ಡಾ.ಜಿ.ಶಂ.ಪರಮಶಿವಯ್ಯ ಪ್ರಶಸ್ತಿ: ಡಾ.ಚಕ್ಕೆರೆ ಶಿವಶಂಕರ್(ರಾಮನಗರ), ಡಾ.ಬಿ.ಎಸ್.ಗದ್ದಿಗಿಮಠ ಪ್ರಶಸ್ತಿ: ಡಾ.ಬಸವರಾಜ ಪೊಲೀಸ್ ಪಾಟೀಲ್ (ಕಲಬುರಗಿ).

ಪತ್ರಿಕಾಗೋಷ್ಠಿಯಲ್ಲಿ ಜಾನಪದ ಅಕಾಡೆಮಿಯ ಎಚ್.ಪ್ರಕಾಶ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಹಾಗೂ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News