ಮುಕ್ರಿ ಕುಟುಂಬಸ್ಥರ ಸಮ್ಮಿಲನ: ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

Update: 2020-02-26 15:01 GMT

ಉಪ್ಪಿನಂಗಡಿ: ಹದಿನೆಂಟನೇ ಶತಮಾನದಲ್ಲಿ ಉಪ್ಪಿನಂಗಡಿಗೆ ಆಗಮಿಸಿದ ಮುಕ್ರಿ ಮನೆತನದ ಮಂದಿ ಬದಲಾದ ಕಾಲಘಟ್ಟದಲ್ಲಿ ಚದುರಿ ಹೋಗಿದ್ದು, ಇವರನ್ನು ಒಗ್ಗೂಡಿಸುವ 'ಮುಕ್ರಿ ಕುಟುಂಬಸ್ಥರ ಸಮ್ಮಿಲನ' ಫೆ.26ರಂದು ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆಯಿತು. ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರನ್ನು ಅಭಿನಂದಿಸಲಾಯಿತು. 

ಹಾಜಬ್ಬರನ್ನು ಅಭಿನಂದಿಸಿ ಮಾತನಾಡಿದ ಯುವ ಚಿಂತಕ ಬಿ.ಎಸ್. ಶರ್ಪುದ್ದೀನ್, ಕಾಡುತ್ತಿದ್ದ ಬಡತನವನ್ನು ಕಡೆಗಣಿಸಿ ಮಕ್ಕಳಿಗೆ ಶಾಲೆಯನ್ನು ನಿರ್ಮಿಸಲು ಸಮಾಜಮುಖೀ ಚಿಂತನೆಯಿಂದ ಶ್ರಮಿಸಿದ ಹರೇಕಳ ಹಾಜಬ್ಬ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ. ಅಂತೆಯೇ ಕೌಟುಂಬಿಕ ಬೆಸುಗೆಯನ್ನು ಬಲಪಡಿಸಿ ಶಕ್ತಿವಂತ ಕೈಗಳು ಅಶಕ್ತರ ನೆರವಿಗೆ ಧಾವಿಸುವಂತಾದರೆ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರಲ್ಲದೆ, ಗುರು ಪರಂಪರೆಯ ಹಿನ್ನೆಲೆಯೊಂದಿಗೆ ಉಪ್ಪಿನಂಗಡಿ ಪರಿಸರಕ್ಕೆ ಆಗಮಿಸಿದ ಸಿಮಾಮ್ ಮುಕ್ರಿ ಎಂಬವರ ಕುಟುಂಬ ವೃಕ್ಷವು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಕೊಡುಗೆ ಸಲ್ಲಿಸುತ್ತಾ ಬಂದಿದೆ. ಬದಲಾದ ಕಾಲಘಟ್ಟದಲ್ಲಿ ಅನನ್ಯ  ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿಕೊಂಡಿದ್ದಾರೆ. ಇವರೆಲ್ಲರನ್ನೂ ಮುಕ್ರಿ ಮನೆತನದಡಿ ತಂದು ಪರಸ್ಪರ ಒಗ್ಗೂಡಿಸುವುದರೊಂದಿಗೆ ಕುಟುಂಬ ಸದಸ್ಯರ ಚಾರಿಟೇಬಲ್ ಟ್ರಸ್ಟ್ ನ್ನು ರಚಿಸಿ ಅಸಹಾಯಕ ಬಂಧುಗಳಿಗೆ ನೆರವು ಕಲ್ಪಿಸುವ ಮೂಲಕ ಬದುಕು ಮತ್ತು ಸಂಪತ್ತನ್ನು ಸದ್ವಿನಿಯೋಗಗೊಳಿಸುವ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಹಲವು ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯವಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಅವರು, ನಾನೋರ್ವ ಸಾಮಾನ್ಯ ವ್ಯಕ್ತಿ. ಬಡತನದಿಂದ ಬಂದವ. ನನ್ನೂರಿನ ಮಕ್ಕಳಿಗೂ ಉತ್ತಮ ಶಿಕ್ಷಣದ ಸೌಲಭ್ಯ ಸಿಗಬೇಕೆಂಬ ಕನಸಿತ್ತು. ಅದನ್ನು ನನಸಾಗಿಸಲು ಹೊರಟೆ, ಎಲ್ಲರ ಸಹಾಯವನ್ನೂ ಯಾಚಿಸಿದೆ. ಹೀಗೆ ಎಲ್ಲರ ಸಹಕಾರದಿಂದ ನಾನಿಂದು ಈ ಮಟ್ಟಕ್ಕೆ ಗುರುತಿಸಿಕೊಳ್ಳುವಂತಾಗಿದೆ. ನಾನು ಎಲ್ಲರಿಗೂ ಚಿರಋಣಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಹೈಲ್ ಉಪ್ಪಿನಂಗಡಿ, ಈಗಾಗಲೇ ಲಭಿಸಿದ ಮಾಹಿತಿಯಂತೆ ಸಂತತಿ ನಕ್ಷೆ ರೂಪಿಸಿ 2800 ಮಂದಿಯನ್ನು ಮುಕ್ರಿ ವಂಶಸ್ಥರೆಂದು ಗುರುತಿಸಲಾಗಿದೆ. ಅವರಲ್ಲಿ ಅನೇಕರು ಇಂದಿಲ್ಲಿ ಭಾಗವಹಿಸಿದ್ದಾರೆ. ದೇಶ, ಹೊರ ದೇಶಗಳಲ್ಲಿ ವಾಸ್ತವ್ಯ ಹೊಂದಿರುವ ಪ್ರಮುಖ ಸ್ಥಾನಗಳಲ್ಲಿರುವರೂ ಇಂದು ಇಲ್ಲಿ ಸೇರಿಕೊಂಡಿದ್ದಾರೆ. ಮುಂದೆ ಹಲವು ಉತ್ತಮ ಕಾರ್ಯಕ್ರಮಗಳೊಂದಿಗೆ ಕುಟುಂಬದೊಳಗಿನ ಐಕ್ಯತೆಯನ್ನು ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದರು.   

ಮುಕ್ರಿ ಕುಟುಂಬ ಚಾರಿಟೇಬಲ್ ಟ್ರಸ್ಟ್ ನ ಲೋಗೋವನ್ನು ಹಿರಿಯರಾದ ಹಾಜಿ ದಾವೂದ್ ಮುಕ್ರಿ ಅನಾವರಣಗೊಳಿಸಿದರು. ಬಳಿಕ ಕುಟುಂಬಿಕರಿಗಾಗಿ ಇಸ್ಲಾಮಿಕ್ ಕಲಾ ಸ್ಪರ್ಧೆ, ಕಿರಾಅತ್ ಸ್ಪರ್ಧೆ, ಗಾಯನ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ವೇದಿಕೆಯಲ್ಲಿ ಯೂಸುಫ್ ಹಾಜಿ, ಪಿ.ಎಸ್. ಅಬೂಬಕ್ಕರ್, ಆದಂ ಪುರುಷರಕಟ್ಟೆ, ಅಬ್ದುಲ್ ಖಾದರ್, ಅಬ್ದುಲ್ ಲತೀಫ್ ಉಪ್ಪಳ, ಅಬೂಬಕ್ಕರ್, ಬಿ.ಎಂ. ಇಬ್ರಾಹೀಂ, ಪೂಕುಂಞಿ, ಹಮೀದ್ ಪುತ್ತೂರು, ಮೂಸಾ ಹಾಜಿ ಮರೀಲು ಉಪಸ್ಥಿತರಿದ್ದರು. 

ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಕ್ರಿ ಕುಟಂಬ ಸದಸ್ಯರ ಚಾರಿಟೇಬಲ್ ಟ್ರಸ್ಟ್ ಅನ್ನು ರಚಿಸಲು ನಿರ್ಧರಿಸಿ, ಟ್ರಸ್ಟ್ ನಡಿ ಕೈಗೊಳ್ಳಬೇಕಾದ ಪ್ರಮುಖ ಕಾರ್ಯಗಳಾದ ವಿದ್ಯಾಲಯಗಳನ್ನು ತೆರೆಯುವುದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. ಆರೋಗ್ಯ, ಶುಚಿತ್ವದ ಅರಿವು ಮೂಡಿಸುವುದು, ಸಾಮೂಹಿಕ ಸರಳ ವಿವಾಹಕ್ಕೆ ಒತ್ತು ನೀಡುವುದು, ಜಾಗೃತಿ ವಿಚಾರಗೋಷ್ಠಿ ನಡೆಸುವುದು, ವನಮಹೋತ್ಸವ, ರಕ್ತದಾನ, ನೇತ್ರದಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಆರೋಗ್ಯ ಸಲಹಾ ಕೇಂದ್ರ, ಕುಟುಂಬ ಸಲಹಾ ಕೇಂದ್ರಗಳನ್ನು ತೆರೆಯುವುದು. ವಿಕಲಾಂಗರ ಒಳಿತಿಗೆ ಶ್ರಮಿಸುವುದು, ಉಳಿತಾಯ ಮನೋಭಾವನೆ ಮೂಡಿಸುವುದು, ಸ್ವ ಉದ್ಯೋಗ ತರಬೇತಿ ನೀಡುವ ಬಗ್ಗೆ ನಿರ್ಣಯ ಮಂಡಿಸಲಾಯಿತು. ವೇದಿಕೆಯಲ್ಲಿ ಯೂಸುಫ್ ಗಡಿಯಾರ, ವಕೀಲ ನಿಹಾಝ್, ಸತ್ತಾರ್ ಉಪಸ್ಥಿತರಿದ್ದರು. ಮುಕ್ರಿ ಕುಟುಂಬದ 1,800 ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದರು.  

ಪತ್ರಕರ್ತ ಸಿದ್ದೀಕ್ ನಿರಾಜೆ ಸ್ವಾಗತಿಸಿ, ಸಮೀಮ್ ವಂದಿಸಿದರು. ನಶಾಹತ್, ಸಿದ್ದೀಕ್ ಉಪ್ಪಳ ಕಾರ್ಯಕ್ರಮ ನಿರ್ವಹಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News