ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಎಂ.ಮಹೇಶ್ವರ ರಾವ್ ಸೂಚನೆ

Update: 2020-02-26 14:56 GMT

ಉಡುಪಿ, ಫೆ.26: ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಬುಧವಾರ, ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಳೆದ ಬಾರಿ ಬೇಸಿಗೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ತಲೆದೋರಿದ ನೀರಿನ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಮಹೇಶ್ವರ ರಾವ್, ಈ ಬಾರಿ ಮೇ ಅಂತ್ಯದವರೆಗೂ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ನಿರ್ದೇಶಗಳನ್ನು ನೀಡಿದರು.

ನೀರಿನ ಸರಬರಾಜು ಕಡಿತಗೊಳಿಸುವ ನಿರ್ಣಯ ಕೈಗೊಳ್ಳುವ ಮೊದಲು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ತತ್ಪರರಾಗುವಂತೆ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ಬೇಸಿಗೆ ಸಮಯದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸುವ ಕುರಿತಂತೆ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದ್ದು, ಇದರ ಪ್ರಾಯೋಗಿಕ ಬಳಕೆಯ ಕುರಿತು ಎಲ್ಲಾ ತಹಶೀಲ್ದಾರ್‌ಗಳಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಕಾಲ್ ಸೆಂಟರ್‌ಗಳನ್ನು ತೆರೆಯುವಂತೆ ತಿಳಿಸಿದ ಮಹೇಶ್ವರ ರಾವ್, ನದಿ ದಂಡೆಯಲ್ಲಿರುವ ರೈತರಿಗೆ ನದಿಯ ನೀರು ಬಳಸುವುದರ ಬದಲು ಹನಿ ನೀರಾವರಿ ಪದ್ದತಿ ಅಳವಡಿಸಿ ಕೊಳ್ಳುವ ಕುರಿತಂತೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಸಿ, ಅವರ ಮನವೊಲಿ ಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮಲೇರಿಯಾ ಮುಂತಾದ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ರಾವ್, ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸದ ಕಟ್ಟಡ ಮಾಲಕರಿಗೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುವಂತೆ ಹಾಗೂ ಈ ಬಗ್ಗೆ ನಗರಸಭೆಯ ಬೈಲಾದಲ್ಲಿ ಅಳವಡಿಸಿ. ನಗರಸಭೆಯ ಅಧಿಕಾರಿಗಳ ತಂಡ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಎಳನೀರು ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಮೌಲ್ಯವರ್ಧಿತ ಮಾಡುವ ಕುರಿತಂತೆ ತೋಟಗಾರಿಕಾ ಅಧಿಕಾರಿಗಳು ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಪರಿಶೀಲಿಸುವಂತೆ ಹಾಗೂ ಮೌಲ್ಯವರ್ಧನೆ ಮಾಡಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಅಗತ್ಯ ಸಹಾಯಧನ ಮತ್ತು ಕೈಗಾರಿಕೆ ಸ್ಥಾಪನೆಗೆ ಸ್ಥಳವನ್ನು ನೀಡುವಂತೆ ಸೂಚಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಪ್ರಸ್ತುತ 90 ಮಂದಿ ಡಯಾಲಿಸಿಸ್‌ಗೆ ಒಳಪಡುತ್ತಿದ್ದು, 50 ಮಂದಿ ಕಾಯುವಿಕೆ ಪಟ್ಟಿಯಲ್ಲಿ ಇದ್ದಾರೆ ಎಂಬುದನ್ನು ಪರಿಶೀಲಿಸಿದ ಮಹೇಶ್ವರ ರಾವ್, ಜಿಲ್ಲೆಯ ಖಾಸಗಿ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯಿಂದ ಡಯಾಲಿಸಿಸ್ ಯಂತ್ರ ನೀಡಲು ಆಸಕ್ತರಾಗಿದ್ದಲ್ಲಿ ಪರಿಶೀಲಿಸುವಂತೆ ಹಾಗೂ ಕಾರ್ಕಳದ ನೂತನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಅಳವಡಿಸುವಂತೆ ಜಿಲ್ಲಾ ಸರ್ಜನ್‌ಗೆ ಸೂಚಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ವಾರದಲ್ಲಿ ಒಂದು ದಿನ ಕಚೇರಿಯ ಕೆಲಸವನ್ನು ಬಿಟ್ಟು, ತಮ್ಮ ಇಲಾಖಾ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿಯ ವೀಕ್ಷಣೆಗಾಗಿ ಕ್ಷೇತ್ರಗಳಿಗೆ ಭೇಟಿಯನ್ನು ನೀಡುವಂತೆ ಸೂಚಿಸಿದ ಮಹೇಶ್ವರ ರಾವ್, ಈ ಬಗ್ಗೆ ಜಿಪಂ ಸಿಇಓ ಮೂಲಕ ವೇಳಾಪಟ್ಟಿ ತಯಾರಿಸುವಂತೆ ಹಾಗೂ ನಿಗದಿತ ಭೇಟಿಯ ದಿನದಂದು ಯಾವುದೇ ಸಭೆಗಳಿದ್ದರೆ ಪೂರ್ವಾನುಮತಿ ಪಡೆಯುವಂತೆ ಸೂಚಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವಂತೆ ತಿಳಿಸಿದ ಕಾರ್ಯದರ್ಶಿ, ಪಡುಕೆರೆ ಬೀಚ್‌ನಲ್ಲಿ ಲೈಟ್ ಅಳವಡಿಕೆ ಮತ್ತು ಕಾಪು ಲೈಟ್‌ಹೌಸ್ ಬಳಿ ಅಗತ್ಯ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯ ಗೊಳಿಸುವಂತೆ ಮತ್ತು ಜಿಲ್ಲೆಯಲ್ಲಿ ಮರಳು ಸಾಗಾಟ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯಾಗಿರುವ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News