28ಕ್ಕೆ ಉಡುಪಿಯಲ್ಲಿ ಶಿಬಿರಾರ್ಥಿಗಳಿಂದ ಜಾನಪದ ಉತ್ಸವ

Update: 2020-02-26 15:48 GMT

ಉಡುಪಿ, ಫೆ.26: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ ಇವರ ಸಹಭಾಗಿತ್ವದಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಉಡುಪಿಯಲ್ಲಿ ಆಯೋಜಿಸಿರುವ ವಿವಿಧ ಜಾನಪದ ಪ್ರಕಾರಗಳ ಜಾನಪದ ತರಬೇತಿಯ ಸಮಾರೋಪ ಹಾಗೂ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಜಾನಪದ ಉತ್ಸವ ಫೆ.28ರ ಶುಕ್ರವಾರ ಸಂಜೆ 5ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಾಜ್ಯಾದ್ಯಂತದಿಂದ ಬಂದಿರುವ 75 ಮಂದಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಡೊಳ್ಳು ಕುಣಿತ, ಕೊರಗ ಡೋಲು, ಸಿದ್ಧಿ ಡಮಾಮಿ ನೃತ್ಯ, ಕಂಗಿಲು ನೃತ್ಯ ಹಾಗೂ ಮಲ್ಲಕಂಬ ಜಾನಪದ ಕಲೆಗಳಲ್ಲಿ ರಾಜ್ಯದ ಹಿರಿಯ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯುತಿದ್ದಾರೆ ಎಂದರು.

ಶಿಬಿರದ ಸಮಾರೋಪ ಹಾಗೂ ಜಾನಪದ ಉತ್ಸವ ಫೆ.28ರ ಸಂಜೆ 5ಗಂಟೆಗೆ ರಾಜ್ಯ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ಯಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ವೈದೇಹಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದವರು ವಿವರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳಿಂದ ಜಾನಪದ ಉತ್ಸವ ನಡೆಯಲಿದೆ. ಇದರಲ್ಲಿ ತರಬೇತಿ ಪಡೆದ ಜಾನಪದ ಕಲಾಪ್ರಕಾರಗಳನ್ನು ಇವರು ಪ್ರದರ್ಶಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಎಚ್.ಪ್ರಕಾಶ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News