ಶಿರ್ವ ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣ: ಮುದರಂಗಡಿ ಗ್ರಾಪಂ ಅಧ್ಯಕ್ಷನ ಬಂಧನ

Update: 2020-02-26 15:50 GMT

ಶಿರ್ವ: ನಾಲ್ಕು ತಿಂಗಳ ಹಿಂದೆ ನಡೆದ ಶಿರ್ವ ಚರ್ಚ್‍ನ  ಧರ್ಮಗುರು ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಲಾರು ಗ್ರಾಮದ ಡೇವಿಡ್ ಡಿಸೋಜಾರವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿರ್ವ ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರು ಪ್ರಕರಣದ ಕುರಿತಂತೆ ಮೊಬೈಲ್ ಫ್ಲೋರೆನ್ಸಿಕ್ ಡಿಪಾರ್ಟ್‍ಮೆಂಟ್ ನೀಡಿರುವ ಮಹತ್ವದ ಸುಳಿವಿನ ಆಧಾರದಲ್ಲಿ ಬುಧವಾರ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಆರೋಪಿಗೆ ಮಾ.11ರತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಮಹೇಶ್ ಡಿಸೋಜಾ ಅವರು ತನ್ನ ಕೊಠಡಿಯಲ್ಲಿ ಕಳೆದ ಅಕ್ಟೋಬರ್ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಭಾರೀ ಸುದ್ದಿ ಮಾಡಿತ್ತು. ಫಾದರ್ ನಿಗೂಢ ಸಾವಿನ ಪ್ರಕರಣದ ಕುರಿತಂತೆ ಹಲವು ಸಂಶಯಗಳು, ಊಹಾಪೋಹಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಸಾವಿನ ಪ್ರಕರಣದ ತೀವ್ರ ತನಿಖೆ ನಡೆಸಿ ಫಾಧರ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಶಿರ್ವ ಚರ್ಚ್ ವಠಾರದಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದರು. 

ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿಯವರು ತನಿಖೆಯ ವೇಳೆ ಫಾದರ್ ಮಹೇಶ್ ಡಿಸೊಜಾ ಅವರ ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅವರಿಂದ ವರದಿ ಪಡೆದು ತನಿಖೆ ಮುಂದುವರಿಸಿದ್ದರು. 

ತನಿಖೆಯಲ್ಲಿ ಅಕ್ಟೋಬರ್ 11ರಂದು ರಾತ್ರಿ 8.29ರಿಂದ 9.05 ಗಂಟೆಯ ನಡುವೆ ಆರೋಪಿಯಾಗಿರುವ ಡೇವಿಡ್ ಡಿಸೋಜಾರವರು ಅವರ ಪತ್ನಿ ಪ್ರಿಯಾ ಡಿಸೋಜಾರವರು ಮೊಬೈಲ್ ಫೋನ್‍ನಲ್ಲಿ ಮೆಸೇಜ್ ಮಾಡಿದ್ದನ್ನು ಆಕ್ಷೇಪಿಸಿ ಮೊಬೈಲ್ ಫೋನ್ ಮುಖಾಂತರ ಫಾದರ್ ಮಹೇಶ್ ಡಿಸೋಜಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅವರ ತಾಯಿಗೆ ಅವಮಾನಕರವಾಗಿ ಬೈದು ಅರ್ಧ ಗಂಟೆಯ ಒಳಗೆ ಚರ್ಚ್‍ಗೆ ನುಗ್ಗುತ್ತೇನೆ ಎಂಬಿತ್ಯಾದಿ ಬೆದರಿಕೆ  ಹಾಗೂ ದುಸ್ಪ್ರೇರಣೆ ನೀಡಿರುವುದು ಪೊಲೀಸ್ ತನಿಖೆಯಿಂದ ಇದೀಗ ಬಯಲಾಗಿದೆ. 

ಡೇವಿಡ್ ಡಿಸೋಜಾ ಅವರ ಬೆದರಿಕೆ ಹಾಗೂ ದುಸ್ಪ್ರೇರಣೆಗೆ ಒಳಗಾದ ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದ ಬಳಿಕ ಆರೋಪಿಯು ತನ್ನ ಹೆಂಡತಿಯ ಮೊಬೈಲ್‍ನಲ್ಲಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ಸಂದೇಶಗಳಲ್ಲಿ ಡಿಲಿಟ್ ಮಾಡಿ ಸಾಕ್ಷ್ಯ ನಾಶ ಮಾಡಿರುವುದಾಗಿ ತನಿಖಾಧಿಕಾರಿ ಮಹೇಶ್ ಪ್ರಸಾದ್ ಅವರು ಡೇವಿಡ್ ಡಿಸೋಜಾ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News