ಹಾಜಿ ಅಬ್ದುಲ್ಲಾ ಸ್ಮಾರಕ ಮ್ಯೂಸಿಯಂ ಶಾಶ್ವತ: ಡೆಲಿಯಾ

Update: 2020-02-26 16:34 GMT

ಉಡುಪಿ, ಫೆ.26: ರಾಷ್ಟ್ರೀಕೃತ ಕಾರ್ಪೋರೇಷನ್ ಬ್ಯಾಂಕಿನ ಸ್ಥಾಪಕರಾದ ಉಡುಪಿಯ ಹಾಜಿ ಅಬ್ದುಲ್ಲಾ ಅವರ ಮನೆ ಹಾಗೂ ಅಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಮ್ಯೂಸಿಯಂನ್ನು ಶಾಶ್ವತವಾಗಿ ಉಳಿಸಿಕೊಂಡು ಅದರ ನವೀಕರಣಕ್ಕೆ 68 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ ಬ್ಯಾಂಕಿನ ಆಡಳಿತ ಮಂಡಳಿಗೆ ಹಾಗೂ ಬ್ಯಾಂಕಿನ ಅಧಿಕಾರಿ ವರ್ಗಕ್ಕೆ ಉಡುಪಿಯ ಹಾಜಿ ಅಬ್ದುಲ್ಲಾ ಸ್ಮಾರಕ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಅಭಿನಂದನಾ ಪತ್ರವನ್ನು ಸಲ್ಲಿಸುವ ಮೂಲಕ ತಮ್ಮ ಮೆಚ್ಚುಗೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಟ್ರಸ್ಟ್‌ನ ಪದಾಧಿಕಾರಿಗಳು ಹಾಜಿ ಅಬ್ದುಲ್ಲಾ ಅವರ ಸಂಬಂಧಿ ಸೈಯದ್ ಸಿರಾಜ್ ಅಹ್ಮದ್ ಅವರ ನೇತೃತ್ವದಲ್ಲಿ ಇಂದು ಕಾರ್ಪೋರೇಷನ್ ಬ್ಯಾಂಕಿನ ವಲಯ ಕಚೇರಿಗೆ ಭೇಟಿ ನೀಡಿ ಡಿಜಿಎಂ ಡೆಲಿಯಾ ಎ.ಡಯಾಸ್ ಅವರಿಗೆ ಪುಷ್ಪ ಗುಚ್ಛ ಹಾಗೂ ಟ್ರಸ್ಟ್‌ನ ಪರವಾಗಿ ಪ್ರಶಂಸಾ ಪತ್ರವನ್ನು ಅರ್ಪಿಸಿ ಬ್ಯಾಂಕಿನ ಈ ನಡೆಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿರಾಜ್ ಅಹ್ಮದ್, ಕಾರ್ಪೋರೇಷನ್ ಬ್ಯಾಂಕಿನ ವಿಲೀನಿಕರಣವನ್ನು ಈಗಾಗಲೇ ಕೇಂದ್ರ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಜಿ ಅಬ್ದುಲ್ಲಾ ಅವರ ಮನೆ ಹಾಗೂ ಅವರ ಹೆಸರಿನಲ್ಲಿರುವ ಮ್ಯೂಸಿಯಂನ ಭವಿಷ್ಯದ ಬಗ್ಗೆ ಚಿಂತಿತರಾಗಿ ಈ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೆವು. ಆದರೆ ಬ್ಯಾಂಕ್ ಈಗಾಗಲೇ ಸಂಸ್ಥಾಪಕರ ಮನೆ ಹಾಗೂ ಮ್ಯೂಸಿಯಂನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಹಾಗೂ ಅದರ ನವೀಕರಣಕ್ಕೆ 68 ಲಕ್ಷ ರೂ.ಗಳನ್ನು ಮಂಜೂರು ಮಾಡಿರುವುದನ್ನು ತಿಳಿದು ಇದಕ್ಕಾಗಿ ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದೆವು ಎಂದರು.

ನಾವು ಬ್ಯಾಂಕಿನ ಆಡಳಿತ ಮಂಡಳಿ, ಅಧಿಕಾರಿಗಳ ವರ್ಗ ಹಾಗೂ ಸಿಬ್ಬಂದಿಗಳಿಗೆ ಚಿರರುಣಿಗಳಾಗಿರುತ್ತೇವೆ. ಈ ಮೂಲಕ ಹಾಜಿ ಅಬ್ದುಲ್ಲಾರ ಹೆಸರು ಉಡುಪಿಯಲ್ಲಿ ಶಾಶ್ವತವಾಗಿ ಉಳಿಯಲಿ ಎಂಬುದು ನಮ್ಮ ಆಶಯ ಹಾಗೂ ಹಾರೈಕೆಯಾಗಿದೆ ಎಂದು ಸಿರಾಜ್ ಅಹ್ಮದ್ ನುಡಿದರು.

ಟ್ರಸ್ಟಿಗಳಲ್ಲೊಬ್ಬರಾದ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಹಾಜಿ ಅಬ್ದುಲ್ಲಾ ಅವರೊಂದಿಗೆ ಉಡುಪಿಗೆ ಭಾವನಾತ್ಮಕ ಸಂಬಂಧವಿದೆ. ಉಡುಪಿಯ ಮಟ್ಟಿಗೆ ಹಾಜಿ ಅಬ್ದುಲ್ಲ ಮರೆಯಬಾರದ ವ್ಯಕ್ತಿ. ಆರೋಗ್ಯ, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ, ಮಾಡಿದ ಸೇವೆಯನ್ನು ಯಾರೂ ಮರೆಯದಿರೋಣ. ಅವರೇ ಕಟ್ಟಿಸಿರುವ ಇಲ್ಲೆ ಪಕ್ಕದ ನಾರ್ತ್ ಶಾಲಾ ಆವರಣದಲ್ಲಿರುವ ಹಾಜಿ ಅಬ್ದುಲ್ಲಾ ರಾವ್ ಬಹಾದ್ದೂರ್ ಸಾಹೇಬ್ ಸ್ಮಾರಕ ಬಯಲು ರಂಗಮಂದಿರದ ನವೀಕರಣಕ್ಕೆ ಟ್ರಸ್ಟ್ ಸಂಪನ್ಮೂಲವನ್ನು ಒದಗಿಸಲಿದೆ ಎಂದರು.

ಬ್ಯಾಂಕಿನ ಡಿಜಿಎಂ ಡೆಲಿಯಾ ಎ.ಡಯಾಸ್ ಮಾತನಾಡಿ, ಹಾಜಿ ಅಬ್ದುಲ್ಲಾ ಅವರು ಬ್ಯಾಂಕ್ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿದ್ದಾರಲ್ಲದೇ, ಬ್ಯಾಂಕಿನ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಗೌರವದ ದ್ಯೋತಕವಾಗಿ ಅವರ ಈ ಮನೆ ಹಾಗೂ ವಿಶ್ವ ಪಾರಂಪರಿಕ ಮ್ಯೂಸಿಯಂನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಬ್ಯಾಂಕ್ ನಿರ್ಧರಿಸಿದೆ ಎಂದರು. ಇದರೊಂದಿಗೆ ಮಂಗಳೂರಿನಲ್ಲಿರುವ ಗ್ರಂಥಾಲಯವನ್ನು ಸಹ ಉಳಿಸಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ವಿಶ್ವಸ್ಥರಲ್ಲೊಬ್ಬರಾದ ಹಾಜಿ ಅಬ್ದುಲ್ಲಾ ಕುರಿತು ಸಮಗ್ರ ಕೃತಿಯೊಂದನ್ನು ರಚಿಸಿರುವ ಲೇಖಕ ಪ್ರೊ.ಮುರಳೀಧರ ಉಪಾಧ್ಯ, ಟ್ರಸ್ಟಿಗಳಾದ ಇಕ್ಬಾಲ್ ಮನ್ನಾ, ಯೋಗೇಶ್ ಶೇಠ್, ಹುಸೇನ್ ಕೋಡಿಬೇಂಗ್ರೆ ಹಾಗೂ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News