ಮಂಗಳೂರು ಎಪಿಎಂಸಿ ಬಲವರ್ಧನೆಗೆ ಕ್ರಮ: ಸಚಿವ ಸೋಮಶೇಖರ್

Update: 2020-02-26 16:39 GMT

ಮಂಗಳೂರು, ಫೆ.26: ಬೈಕಂಪಾಡಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯನ್ನು ಬಲವರ್ಧನೆಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ಅದಕ್ಕಾಗಿ ಮೊತ್ತ ಮೊದಲಾಗಿ ಎಪಿಎಂಸಿ ವ್ಯಾಪ್ತಿಗೆ ಸೇರಿದ ನಾಲ್ವರು ಶಾಸಕರು ಹಾಗೂ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಲಿದ್ದೇನೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಬುಧವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಪಿಎಂಸಿ ಅಭಿವೃದ್ಧಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. ಮಂಗಳೂರಿನ ಎಪಿಎಂಸಿಗೆ ಸಂಬಂಧಿಸಿ ಮಂಗಳೂರು ಅಥವಾ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದೇನೆ. ಎಪಿಎಂಸಿಯಲ್ಲಿ ಹಣದ ಕೊರತೆ ಇಲ್ಲ. ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಲು ಯತ್ನಿಸಲಿದ್ದೇನೆ ಎಂದ ಸಚಿವರು, ಸಹಕಾರ ಇಲಾಖೆಯಲ್ಲಿ ಕೆಲವೊಂದು ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ರಾಜ್ಯದ ಸಹಕಾರಿಗಳಿಂದ ಸಲಹೆ ಕೇಳಿದ್ದೇನೆ ಎಂದರು.

ಸಾಲ ಮನ್ನಾ ವಿಚಾರದಲ್ಲಿ ಸರಿಯಾಗಿ ಹಣ ಬಿಡುಗಡೆ ಆಗಿಲ್ಲ ಎಂದು ಹಲವರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಯಶಸ್ವಿನಿ ಯೋಜನೆ ರದ್ದುಗೊಳಿಸಿ ಆರೋಗ್ಯ ಇಲಾಖೆಯಲ್ಲಿ ವಿಲೀನಗೊಳಿಸಿದ ಬಗ್ಗೆಯೂ ಹಲವರು ಆಕ್ಷೇಪಿಸಿದ್ದಾರೆ. ಯಶಸ್ವಿನಿ ಯೋಜನೆಯನ್ನು ಪ್ರತ್ಯೇಕಗೊಳಿಸಿ ಮತ್ತೆ ಹಿಂದಿನಂತೆ ಜಾರಿಗೊಳಿಸಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಸೋಮಶೇಖರ್ ನುಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶಾಸಕರಾದ ಡಿ.ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News