ದೆಹಲಿ ಹಿಂಸಾಚಾರ ಖಂಡಿಸಿ ದೇರಳಕಟ್ಟೆಯಲ್ಲಿ ಎಸ್ ಡಿಪಿಐ ಪ್ರತಿಭಟನೆ

Update: 2020-02-26 17:09 GMT

ಕೊಣಾಜೆ: ದೆಹಲಿ ಹಿಂಸಾಚಾರ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ವತಿಯಿಂದ ಪ್ರತಿಭಟನೆಯು ಬುಧವಾರ ದೇರಳಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ‌ ಮಾತನಾಡಿದ ಸಜಿಪ ಪಂಚಾಯತಿ ಅಧ್ಯಕ್ಷ ನಾಸೀರ್ ಸಜಿಪ, ನಮ್ಮ ದೇಶ ಸಂವಿಧಾನವನ್ನೇ ಬುಡಮೇಲು ಮಾಡುವ ಕೃತ್ಯ ದೇಶದಾದ್ಯಂತ ನಡೆಯುತ್ತಿದೆ.  ದೆಹಲಿಯಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ದಾಳಿಯು ನಮ್ಮೆಲ್ಲರನ್ನು ತಲ್ಲಣಗೊಳಿಸಿದೆ. ಮೋದಿ,ಶಾ ಅವರ ಕರಾಳ ಕಾನೂನುಗಳು ದೇಶವನ್ನು ಹಾಳು ಮಾಡುತ್ತಿವೆ. ಮುಸ್ಲಿಮರನ್ನು ದಮನಿಸುವ‌ ತಂತ್ರದ ವಿರುದ್ದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ, ಪ್ರತಿಭಟನೆ ಸಂವಿಧಾನ ಬದ್ದವಾದ ಹೋರಾಟ. ದೇಶ ದ್ರೋಹದ ವಿರುದ್ದ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಕೇವಲ ರಾಜಕೀಯಕ್ಕಾಗಿ, ಅಲ್ಪಸಂಖ್ಯಾತ ದಮನಕ್ಕಾಗಿ, ಹಿಂದೂ ದೇಶದ ನಿರ್ಮಾಣಕ್ಕಾಗಿ ಈ ಸರಕಾರ ವ್ಯವಸ್ಥಿತ ಸಂಚು ಮಾಡುತ್ತಿದೆ. ಇಡೀ ಪ್ರಪಂಚದ ಎಲ್ಲಾ ರಾಷ್ಟ್ರ ಗಳು ಇಂದು ಭಾರತದ ಸ್ಥಿತಿಯನ್ನು ಗಮನಿಸುತ್ತಿದೆ. ಇನ್ನು ನಾಲ್ಕು ವರ್ಷಗಳು ಮಾತ್ರ ಇವೆ. ಜನ ನಿಮ್ಮನ್ನು ಕೆಳಗಿಳಿಸಲು ಕಾಯುತ್ತಿದ್ದಾರೆ ಎಂದರು.

18 ಹೆಣಗಳು ದೆಹಲಿಯಲ್ಲಿ ಉರುಳಿರುವಾಗ ಎಲ್ಲಿದೆ ಉಳಿದ ಪಕ್ಷಗಳು? ಎಸ್ ಡಿಪಿಐ ಪಕ್ಷವು ಈ ನಿಟ್ಟಿನಲ್ಲಿ ದೇಶಾದ್ಯಂತ  ನಿರಂತರ ಹೋರಾಟ ನಡೆಸುತ್ತಿದೆ. ಹುತಾತ್ಮರಾದ ಎಲ್ಲರಿಗೂ ಸದ್ಗತಿಯನ್ನು ನೀಡಲಿ ನಾವೆಲ್ಲೆರೂ ಬೇಡೋಣ ಎಂದರು.

ಕ್ಯಾಂಪಸ್ ಪ್ರಂಟ್ ಇಂಡಿಯಾದ ರಾಜ್ಯಾಧ್ಯಕ್ಷ ಪಯಾಝ್ ದೊಡ್ಡಮನೆ ಮಾತನಾಡಿ, ಮುಸ್ಲಿಮರು ದೇಶದ ಸಂವಿಧಾನಕ್ಕೆ ಗೌರವ ಕೊಟ್ಟು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಇದನ್ನೇ ಪೊಲೀಸರು ಅಸಹಾಯಕತೆ ಎಂದು ತಿಳಿದುಕೊಳ್ಳಬೇಡಿ. ನಮಗೂ ತಾಳ್ಮೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಿ ಮುನ್ನಡೆಯುತ್ತಿದ್ದೇವೆ. ನೀವು ಒಂದು ಶಾಹೀನ್ ಭಾಗನ್ನು ಕ್ಲೀನ್ ಮಾಡಲು ಹೋದರೆ ದೇಶದಲ್ಲಿ‌ ನೂರಾರು ಶಾಹಿನ್ ಭಾಗ್ ಗಳು ಹುಟ್ಟಿಕೊಳ್ಳಲಿದೆ ಎಂದರು.

ಎಸ್ ಡಿಪಿಐ ಮಂಗಳೂರು ವಿಧಾನಸಭಾ ಅಧ್ಯಕ್ಷ ಅಬ್ಬಾಸ್ ಕಿನ್ಯ, ಎಸ್ ಡಿಪಿ ಐ ಮುಖಂಡರಾದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ,  ಇರ್ಷಾದ್ ಅಜ್ಜಿನಡ್ಕ, ನಾಸೀರ್ ದೇರಳಕಟ್ಟೆ, ಸುಲೈಮಾನ್ ಉಸ್ತಾದ್, ಹನೀಫ್ ಬೋಳಿಯಾರ್, ಇಸ್ಮಾಯಿಲ್ ತಲಪಾಡಿ, ರಫೀಕ್ ಉಸ್ತಾದ್, ಅಬ್ದುಲ್ ಲತೀಫ್ ಕೋಡಿಜಾಲ್, ರಮೀಝ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News