ಉಡುಪಿ: ​ಕಳ್ಳತನದ ಆರೋಪಿಗಳಿಗೆ ಶಿಕ್ಷೆ

Update: 2020-02-26 17:15 GMT

ಉಡುಪಿ, ಫೆ.26: ಶಿರ್ವ ಗ್ರಾಮದ ಪಂಜಿಮಾರ್ ಕೋಡುಗುಡ್ಡೆ ಎಂಬಲ್ಲಿರುವ ಸಿರಿಲ್ ನಜರತ್ ಇವರ ವಾಸ್ತವ್ಯದ ಮನೆಯಲ್ಲಿ 2010ರ ಜ.26ರಂದು ಯಾರು ಇಲ್ಲದ ವೇಳೆ ಮನೆಯ ಹಿಂಬದಿಯ ಕಿಟಕಿಯ ಮೂಲಕ ಟೆರೇಸ್ ಮೇಲೆ ಪ್ರವೇಶಿಸಿ ಅಲ್ಲಿನ ಮರದ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ, ಕಬ್ಬಿಣದ ಕಪಾಟಿನ ಬಾಗಿಲನ್ನು ತೆರೆದು ಅದರೊಳಗಿದ್ದ ಚಿನ್ನಾರಣಗಳು, ವಾಚ್, ನಗದು ಹಣ ಮತ್ತು ಬಹರೈನ್ ದೇಶದ ಕರೆನ್ಸಿ ಹಣವನ್ನು ಕಳವು ಮಾಡಿರುವ ಪ್ರಕರಣದ ಆರೋಪಿಗಳಾದ ಮುತ್ತಪ್ಪ ಸುರೇಶ್, ಇಕ್ಬಾಬ್ ಅಹಮ್ಮದ್ ಅನ್ಸಾರಿ ಮತ್ತು ಸುದರ್ಶನ್ ಇವರ ಮೇಲಿನ ಆರೋಪಗಳು ಸಾಬೀತಾಗಿದ್ದು ಉಡುಪಿಯ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಅಂದಿನ ಕಾಪು ವೃತ್ತ ನಿರೀಕ್ಷಕ ಚೆಲುವರಾಜು ಬಿ. ತನಿಖೆ ನಡೆಸಿ ದೋಷಾ ರೋಪಣಾ ಪತ್ರ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಉಡುಪಿ 3ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಗಳ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಹಂತೇಶ್ ಭೂಸಗೋಳ ಅವರು 1ನೇ ಆರೋಪಿ ಮುತ್ತಪ್ಪ ಸುರೇಶ್‌ಗೆ 3,500 ರೂ. ದಂಡ ಮತ್ತು 2 ವರ್ಷ 6 ತಿಂಗಳು ಶಿಕ್ಷೆ, 2ನೇ ಆರೋಪಿ ಇಕ್ಬಾಲ್ ಅಹಮ್ಮದ್ ಅನ್ಸಾರಿಗೆ 3,500 ರೂ. ದಂಡ ಮತ್ತು 2 ವರ್ಷ 6 ತಿಂಗಳು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ಪ್ರಕರಣ ನಡೆಸಿದ್ದರು.

ಮತ್ತೊಂದು ಪ್ರಕರಣದಲ್ಲೂ ಶಿಕ್ಷೆ:

ಇದೇ ಮೂವರು ಆರೋಪಿಗಳ ವಿರುದ್ಧ 2010 ರ ಜ.21ರಂದು ರಾತ್ರಿ ಶಿರ್ವ ಗ್ರಾಮದ ಜತ್ರಬೆಟ್ಟು ಎಂಬಲ್ಲಿರುವ ರೇಮಂಡ್ ಕ್ಯಾಬ್ರಾಲ್‌ರ ಮನೆಯ ಕಳ್ಳತನಕ್ಕೆ ಪ್ರಯತ್ನಿಸಿದ ಪ್ರಕರಣದಲ್ಲೂ ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಬಗ್ಗೆ ಶಿರ್ವ ಪೊಲೀಸ್ ನಿರೀಕ್ಷಕ ಎನ್.ಸಿ ಗಣೇಶ್, ಪ್ರಕರಣ ದಾಖಲಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದಲ್ಲೂ ನ್ಯಾಯಾಧೀಶ ಮಹಂತೇಶ್ ಭೂಸಗೋಳರು 1ನೇ ಆರೋಪಿ ಮುತ್ತಪ್ಪ ಸುರೇಶ್‌ಗೆ 9,000 ರೂ. ದಂಡ ಮತ್ತು 5 ವರ್ಷ 10 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News