ಅಲೆಮಾರಿ ಬುಡಕಟ್ಟು ಶಿಳ್ಳೆಕ್ಯಾತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಮನವಿ

Update: 2020-02-26 17:38 GMT

ಮಂಗಳೂರು, ಫೆ.26: ನಗರ ವ್ಯಾಪ್ತಿ ಮಿತಿಯಲ್ಲಿ ಹರಿಯುತ್ತಿರುವ ನೇತ್ರಾವತಿ, ಗುರುಪುರ ನದಿ ಪಾತ್ರ ಮತ್ತು ತೋಕೂರಿನ 7 ಕಡೆ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದು ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ವಿವಿಧೆಡೆ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಸರ್ವೆ ನಡೆಸಬೇಕು, ಈ ಸಮುದಾಯದ ಕುಟುಂಬಗಳ ಆರೋಗ್ಯ ಕಾರ್ಡು, ಮತ್ತು ಇತರ ಗುರುತಿನ ಕಾರ್ಡುಗಳನ್ನು ವಿತರಿಸಬೇಕು, ಉಚಿತ ಮನೆ ನಿವೇಶನ ಒದಗಿಸಬೇಕು,ಪ್ರಸ್ತುತ ವಾಸಿಸುತ್ತಿರುವ ಟೆಂಟ್‌ಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ದಾರಿ, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆ ಮಾಡಬೇಕು, ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಕೋಶದ ಸೌಲಭ್ಯಗಳನ್ನು ಈ ಟೆಂಟ್ ಪ್ರದೇಶಗಳಿಗೆ ಅಳವಡಿಸಬೇಕು, ಮೀನುಗಾರಿಕಾ ವೃತ್ತಿಯಲ್ಲಿ ನಿರತರಾಗಿರುವಾಗ ನಡೆಯುವ ದೌರ್ಜನ್ಯಕ್ಕೆ ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವ ಸಲಹೆಗಾರ ಡಾ. ಕೃಷ್ಣಪ್ಪಕೊಂಚಾಡಿ, ಸಮಿತಿ ಗೌರವಾಧ್ಯಕ್ಷ ಸಂತೋಷ್ ಬಜಾಲ್, ಅಧ್ಯಕ್ಷ ರವಿ, ಕಾರ್ಯದರ್ಶಿ ವೆಂಕಟೇಶ್,ಶಿಳ್ಳೆಕ್ಯಾತ ಸಮುದಾಯದ ಲೋಕೇಶ್, ಲಕ್ಷ್ಮಣ, ರಘ, ಶಿವಪ್ಪ, ಅಶೋಕ್, ಆನಂದ,ಮಧು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News