​ಸುರತ್ಕಲ್ : ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ಚಾಲೆ

Update: 2020-02-26 17:51 GMT

ಸುರತ್ಕಲ್,ಫೆ.26: ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಗೊಳಿಸಲಾದ 1 ಕೋ. ರೂ. ಅನುದಾನದಲ್ಲಿ ಸುರತ್ಕಲ್ ಬಂಟರ ಭವನ ಬಳಿ ಹರಿಯುವ ಪ್ರಧಾನ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸಣ್ಣ ನೀರಾವರಿ ಇಲಾಖೆಯಿಂದ 12.50 ಕೋ.ರೂ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಲಾಗಿದೆ. ಕಿರು ಕಿಂಡಿ ಅಣೆಕಟ್ಟು ಸಹಿತ ವಿವಿಧೆಡೆ ಹಂಚಿಕೆ ಮಾಡಲಾಗುವುದು. ಈ ಪ್ರದೇಶದಲ್ಲಿ ಕೃತಕ ನೆರೆಹಾವಳಿಯಿಂದ ಹಲವಾರು ಮನೆಗಳಿಗೆ ಸಮಸ್ಯೆಯಾಗುತ್ತಿತ್ತು. ಸ್ಥಳೀಯರ ಅಹವಾಲು ಪರಿಗಣಿಸಿ ಈ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದರು.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿದ್ದು ಶಾಶ್ವತವಾಗಿ ದುರಸ್ತಿ ಮಾಡಲು ಅಮೃತ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಎಲ್ಲಾ ವಾರ್ಡ್‌ಗಳಲ್ಲಿಯೂ ತಲಾ 50 ಲಕ್ಷ ರೂ. ಎಸ್‌ಎ್ಸಿ ಅನುದಾನದಡಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಭರತ್ ಶೆಟ್ಟಿ ತಿಳಿಸಿದರು.

ಯಾವುದೇ ಕಾರಣಕ್ಕೆ ಚರಂಡಿ ತೋಡುಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಸಹಿತ ಕರಗದ ವಸ್ತು ಬಿಸಾಡದಿರಿ.ಪ್ರತೀ ಬಾರಿಯೂ ಹಲವೆಡೆ ಚರಂಡಿ ಬ್ಲಾಕ್ ಆದ ಕಾರಣ ಸಮಸ್ಯೆಯಾಗಿರುವುದನ್ನು ಒಪ್ಪಿಕೊಳ್ಳ ಬೇಕಿದೆ. ಪಾಲಿಕೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿದ್ದು ಇದರ ಸದುಪಯೋಗ ಪಡೆಯಬೇಕಿದೆ ಎಂದು ಭರತ್ ಶೆಟ್ಟಿ ನುಡಿದರು.

ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಮನಪಾ ಸದಸ್ಯರಾದ ಶ್ವೇತಾ ಪೂಜಾ,ಸರಿತಾ ಶಶಿಧರ್, ನಯನಾ ಕೋಟ್ಯಾನ್, ವರುಣ್ ಚೌಟ, ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ಬಂಟರ ಸಂಘದ ಪ್ರಮುಖರಾದ ಡಿಕ್ಸ್ ದೇವಾನಂದ ಶೆಟ್ಟಿ, ನಾಗರಿಕ ಸಮಿತಿ ಮಂಗಳೂರು ಇದರ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಕೃಷ್ಣಾಪುರ, ಜಗನ್ನಾಥ ಅತ್ತಾರ್ ಕೊಡಿಪಾಡಿ ಬಾಳಿಕೆ, ಮಂಜುಕಾವ ಪಣಂಬೂರು ಕಾವರ ಮನೆ, ಗುತ್ತಿಗೆದಾರ ಬಾಲಕೃಷ್ಣ ರೈ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಕೃಷ್ಣಕುಮಾರ್, ತೃಪ್ತಿ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪುಷ್ಪರಾಜ್ ಚೇಳಾಯಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News