ಕುಸ್ತಿ: ಸಾಕ್ಷಿ ಮಲಿಕ್ ವಿರುದ್ಧ ಮತ್ತೊಮ್ಮೆ ಗೆದ್ದ ಸೋನಂ ಮಲಿಕ್

Update: 2020-02-26 18:05 GMT

ಲಕ್ನೊ, ಫೆ.26: ಯುವ ಕುಸ್ತಿ ತಾರೆ ಸೋನಂ ಮಲಿಕ್ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ವಿರುದ್ಧ ಟ್ರಯಲ್ಸ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ರೋಮ್ ರ್ಯಾಂಕಿಂಗ್ ಸಿರೀಸ್ ಹಾಗೂ ಇತ್ತೀಚೆಗೆ ಕೊನೆಗೊಂಡ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅಷ್ಟೇನು ಪ್ರಬಲ ಪ್ರದರ್ಶನ ನೀಡದ ಕಾರಣ ಸೋನಂ ಹಾಗೂ ಸಾಕ್ಷಿಗೆ ಮತ್ತೊಮ್ಮೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸೂಚಿಸಲಾಗಿತ್ತು. 18ರ ಹರೆಯದ ಸೋನಂ 62 ಕೆಜಿ ಸ್ಪರ್ಧೆಯಲ್ಲಿ ಹಿರಿಯ ಕುಸ್ತಿಪಟು ಸಾಕ್ಷಿ ಮಲಿಕ್‌ಗೆ ಕಠಿಣ ಸವಾಲೊಡ್ಡಿದರು.

ಮೊದಲಿಗೆ ರಾಧಿಕಾರನ್ನು ಸೋಲಿಸಿದ ಸೋನಂ ಅವರು ಸೆಮಿ ಫೈನಲ್‌ನಲ್ಲಿ ಸರಿತಾ ಮೋರ್(3-1) ಅವರನ್ನು ಮಣಿಸಿದರು. ಫೈನಲ್‌ನಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಅವರನ್ನು ಸೋಲಿಸಿದರು. 1-2 ಹಿನ್ನಡೆಯಲ್ಲಿದ್ದಾಗ ಎರಡನೇ ಅವಧಿಯಲ್ಲಿ ಪಂದ್ಯ ಕೊನೆಗೊಳ್ಳಲು ಒಂದು ನಿಮಿಷ ಬಾಕಿ ಇರುವಾಗ ಸಾಕ್ಷಿಯನ್ನು ಸೋನಂ ಹಿಮ್ಮೆಟ್ಟಿಸಿದರು.

2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಪೂಜಾ ದಾಂಡಾ ಸಹಿತ 9 ಕುಸ್ತಿ ತಾರೆಯರು ಮೇಲ್‌ತೂಕದ ವಿಭಾಗದಲ್ಲಿ ಕಾಣಿಸಿಕೊಂಡರು.

ಹಾಲಿ ವಿಶ್ವ ಕೆಡೆಟ್ ಚಾಂಪಿಯನ್ ಸೋನಂ ಕೋಚ್ ಅಜ್ಮೆರ್ ಮಲಿಕ್ ಮಾರ್ಗದರ್ಶನದಲ್ಲಿ ಸೋನೆಪತ್‌ನ ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘‘ಹಿನ್ನಡೆಯ ಹೊರತಾಗಿಯೂ ಸಾಕ್ಷಿ ಮಲಿಕ್‌ರನ್ನು ಮಣಿಸಿರುವ ಯುವ ಕುಸ್ತಿ ತಾರೆಯ ಸಾಧನೆ ಮಹತ್ವದ್ದಾಗಿದೆ. ರೋಮ್ ಸ್ಪರ್ಧೆಯಲ್ಲಿ ಮೊಣಕೈಗೆ ಗಾಯವಾಗಿ ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ. ಸರಿಯಾಗಿ ತರಬೇತಿಯನ್ನು ಪಡೆದಿರಲಿಲ್ಲ. ಈ ಎಲ್ಲ ಸಮಸ್ಯೆಯ ನಡುವೆಯೂ ಆಕೆಯ ಸಾಧನೆ ಶ್ಲಾಘನೀಯ’’ ಎಂದು ಅಜ್ಮೇರ್ ಹೇಳಿದ್ದಾರೆ.

‘‘ಅಪ್ಪರ್ ವೇಟ್ ವಿಭಾಗದ ಕುಸ್ತಿಪಟಗಳು ತಾವು ಯುವ ಹಾಗೂ ಅನನುಭವಿ ಸೋನಂ ವಿರುದ್ಧ ಪ್ರಾಬಲ್ಯ ಸಾಧಿಸಬಹುದು ಎಂದು ಭಾವಿಸಿದ್ದರು. ಇಂತಹ ಸ್ಪರ್ಧಾತ್ಮಕ ಗುಂಪಿನಲ್ಲಿ ಜಯಶಾಲಿಯಾದರೆ, ಇದೊಂದು ದೊಡ್ಡ ಸಾಧನೆಯಾಗಲಿದೆ ಎಂದು ಸೋನಂಗೆ ಸಲಹೆ ನೀಡಿದ್ದೆ. ಆಕೆಯ ಸಾಧನೆಯಿಂದ ನನಗೆ ಹೆಮ್ಮೆಯಾಗುತ್ತಿದೆ’’ ಎಂದು ಅಜ್ಮೇರ್ ಹೇಳಿದ್ದಾರೆ.

ಭಾರತದ ಕುಸ್ತಿ ಒಕ್ಕೂಟ( ಡಬ್ಲುಎಫ್‌ಐ)ವರ್ಷದ ಆರಂಭದಲ್ಲಿ ರೋಮ್ ರ್ಯಾಂಕಿಂಗ್ ಸಿರೀಸ್ ಸ್ಪರ್ಧೆ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ಗಾಗಿ ನಡೆಸಿದ್ದ ಟ್ರಯಲ್ಸ್‌ನಲ್ಲಿ ಸೋನಂ ಅವರು ಸಾಕ್ಷಿಗೆ ಸೋಲುಣಿಸಿದ್ದರು. ಎರಡೂ ಸ್ಪರ್ಧೆಗಳಲ್ಲಿ ಸೋನಂ ಪದಕ ಗೆಲ್ಲಲು ವಿಫಲರಾಗಿದ್ದರೂ ಐದನೇ ಸ್ಥಾನ ಪಡೆದಿದ್ದರು. ಕುಸ್ತಿಪಟುಗಳ ಪ್ರದರ್ಶನ ತೃಪ್ತಿಕರವಾಗಿರದಿದ್ದರೆ ಮತ್ತೊಮ್ಮೆ ಟ್ರಯಲ್ಸ್ ನಡೆಸುವುದಾಗಿ ಡಬ್ಲುಎಫ್‌ಐ ಸ್ಪಷ್ಟಪಡಿಸಿತ್ತು. ಮಹಿಳಾ ವಿಭಾಗದ 62 ಕೆಜಿ ಹಾಗೂ 76 ಕೆಜಿ ವಿಭಾಗದಲ್ಲಿ ಮತ್ತೊಮ್ಮೆ ಟ್ರಯಲ್ಸ್ ಘೋಷಿಸಿತ್ತು. ಇದೇ ವೇಳೆ ಕಿರಣ್ 76 ಕೆಜಿ ವಿಭಾಗದಲ್ಲಿ ಜಯಶಾಲಿಯಾಗಿದ್ದರು.

ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ಕಿರ್ಗಿ ಸ್ತಾನದ ಬಿಶ್‌ಕೆಕ್‌ನಲ್ಲಿ ಮಾರ್ಚ್ 27ರಿಂದ 29ರ ತನಕ ನಡೆಯಲಿದೆ. ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಫೈನಲ್ ತಲುಪುವ ಕುಸ್ತಿಪಟು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News