ಟೆಸ್ಟ್ ರ್ಯಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸ್ಮಿತ್

Update: 2020-02-26 18:12 GMT

ದುಬೈ, ಫೆ.26: ಭಾರತದ ನಾಯಕ ವಿರಾಟ್ ಕೊಹ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಕೇವಲ 21 ರನ್ ಗಳಿಸಿದ ಹಿನ್ನೆಲೆಯಲ್ಲಿ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನ ದಿಂದ ಕೆಳಗಿಳಿದರು. 906 ಅಂಕ ಗಳಿಸಿರುವ ಕೊಹ್ಲಿ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಹಾಗೂ ಮಾಯಾಂಕ್ ಅಗರ್ವಾಲ್ ಕ್ರಮವಾಗಿ 8ನೇ, 9ನೇ ಹಾಗೂ 10ನೇ ರ್ಯಾಂಕಿನಲ್ಲಿದ್ದಾರೆ.

ಕೊಹ್ಲಿ ಎರಡನೇ ಸ್ಥಾನಕ್ಕೆ ಕುಸಿದ ಕಾರಣ ಸ್ಮಿತ್ 8ನೇ ಬಾರಿ ನಂ.1 ಸ್ಥಾನಕ್ಕೇರಿದ್ದಾರೆ. 2015ರ ಜೂನ್‌ನಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದರು. ಸ್ಮಿತ್ ಹಾಗೂ ಕೊಹ್ಲಿ ಹೊರತುಪಡಿಸಿ 2015ರ ಡಿಸೆಂಬರ್‌ನಲ್ಲಿ 8 ದಿನಗಳ ಕಾಲ ನ್ಯೂಝಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ನಂ.1 ಸ್ಥಾನದಲ್ಲಿದ್ದರು.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗೆ ಮೂರು ವಿಕೆಟ್ ಪಡೆದಿದ್ದರು. ಈಗ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಾಗ್ಯೂ 735 ಅಂಕ ಗಳಿಸಿ ಅಗ್ರ-10ರಲ್ಲಿ ಭಾರತದ ಏಕೈಕ ಬೌಲರ್ ಆಗಿದ್ದಾರೆ.

 ಮೊದಲ ಟೆಸ್ಟ್‌ನಲ್ಲಿ ದೀರ್ಘ ಸಮಯದ ಬಳಿಕ ಆಡಿದ ವೇಗದ ಬೌಲರ್ ಇಶಾಂತ್ ಶರ್ಮಾ ಐದು ವಿಕೆಟ್ ಗೊಂಚಲು ಪಡೆದಿದ್ದರು. ರ್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕ್ರಮವಾಗಿ 9 ಹಾಗೂ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಕಿವೀಸ್ ವೇಗದ ಬೌಲರ್‌ಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ರ್ಯಾಂಕಿಂಗ್‌ನಲ್ಲಿ ಭಾರೀ ಭಡ್ತಿ ಪಡೆದಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಹಾಗೂ ಅಶ್ವಿನ್ ಕ್ರಮವಾಗಿ ಮೂರನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಜಡೇಜ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಅಶ್ವಿನ್ 2 ಇನಿಂಗ್ಸ್ ಗಳಲ್ಲಿ 0 ಹಾಗೂ 4 ರನ್ ಗಳಿಸಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 360 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯ(296 ಅಂಕ)ಎರಡನೇ ಸ್ಥಾನದಲ್ಲಿದೆ. ನ್ಯೂಝಿಲ್ಯಾಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಜಯ ಸಾಧಿಸುವುದರೊಂದಿಗೆ 60 ಅಂಕ ಗಳಿಸಿದೆ. ಒಟ್ಟು 120 ಅಂಕ ಕಲೆ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News