ಪಾಕಿಸ್ತಾನಕ್ಕೆ ಗೆಲುವು

Update: 2020-02-26 18:29 GMT

ಕ್ಯಾನ್‌ಬೆರ,ಫೆ.26: ಐಸಿಸಿ ಆಯೋಜಿತ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮಾಜಿ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿ ಗೆಲುವಿನ ಆರಂಭ ಪಡೆದಿದೆ.

  ಡಯಾನ ಬೇಗ್ ಅವರ ಉತ್ತಮ ಬೌಲಿಂಗ್(2-19)ದಾಳಿಗೆ ತತ್ತರಿಸಿ ಆರಂಭಿಕ ಆಘಾತ ಅನುಭವಿಸಿದ್ದ ವೆಸ್ಟ್‌ಇಂಡೀಸ್ ತಂಡ ಸ್ಟೆಫಾನಿ ಟೇಲರ್(43) ಹಾಗೂ ಶೆರ್ಮೈನ್ ಕ್ಯಾಂಪ್‌ಬೆಲ್(43)ಸಾಹಸದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 124 ರನ್ ಗಳಿಸಿತು. ಐಮನ್ ಅನ್ವರ್(2-32) ಹಾಗೂ ನಿದಾ ದರ್(2-30)ತಲಾ ಎರಡು ವಿಕೆಟ್ ಪಡೆದರು.

  ಪಾಕಿಸ್ತಾನದ ಆರಂಭಿಕ ಆಟಗಾರ್ತಿಯರಾದ ಜಾವೆರಿಯಾ ಖಾನ್(35) ಹಾಗೂ ಮುನೀಬಾ ಅಲಿ(25)ಮೊದಲ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ನಾಯಕಿ ಬಿಸ್ಮಾ ಮರೂಫ್ ಔಟಾಗದೆ 38 ರನ್ ಗಳಿಸಿದ್ದಲ್ಲದೆ, ನಿದಾ ದರ್ ಅವರೊಂದಿಗೆ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 50 ರನ್ ಸೇರಿಸಿ ಪಾಕ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News