ಪಂಚಾಯತ್ ಚುನಾವಣೆಗಳಲ್ಲಿ ಗೆಲ್ಲುವ ಗುರಿ ನಮ್ಮದಾಗಲಿ : ಅಭಯಚಂದ್ರ ಜೈನ್

Update: 2020-02-26 18:39 GMT

ಮೂಡುಬಿದಿರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿಗೆ ದೃತಿಗೆಡದೆ ಮುಂದಿನ ಗ್ರಾಮ ಪಂಚಾಯತ್  ಚುನಾವಣೆಗಳಲ್ಲಿ ಎಲ್ಲಾ 30 ಗ್ರಾಮ ಪಂಚಾಯತ್‍ಗಳನ್ನು ಗೆಲ್ಲುವ ಗುರಿ ನಮ್ಮದಾಗಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು. 

ಸಹಕಾರಿ ಸಂಘ, ಸಂಸ್ಥೆಗಳಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ಬುಧವಾರ ಸಮಾಜ ಮಂದಿರದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು. 

ಬಿಜೆಪಿಯ ಅಪಪ್ರಚಾರದ ಜತೆಗೆ ಕಾಂಗ್ರೆಸ್‍ನ ಕೆಲ ನಾಯಕರ ಅಹಂ ಹಾಗೂ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಚುನಾವಣೆಯಲ್ಲಿ ನಮಗೆ ಸೋಲಾಗಲು ಕಾರಣವಾಯಿತು ಇದಕ್ಕೆ ನಾವ್ಯಾರೂ ಕುಗ್ಗದೆ ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್‍ನ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಆರೋಪಿಸುತ್ತಿದೆ. ಆದರೆ ಯಡಿಯೂರಪ್ಪ ಅವರ ಒಬ್ಬ ಮಗ ಎಂಪಿ, ಇನ್ನೊಬ್ಬ ಮಗ ಶಾಡೊ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ವಂಶ ರಾಜಕಾರಣವಲ್ಲವೆ ಎಂದು ಅವರು ಪ್ರಶ್ನಿಸಿದ ಅವರು ಪಕ್ಷೇತರ ಅಭ್ಯರ್ಥಿ, ಉದ್ಯಮಿ ವಿಜಯ ಮಲ್ಯರನ್ನು ಹಣದ ಪ್ರಭಾವಕ್ಕೊಳಗಾದ ಬಿಜೆಪಿ ಎಂಪಿ ಮಾಡಿಸಿತು. ಇಲ್ಲಿ ಭ್ರಷ್ಟಾಚಾರ ನಡೆಯಲಿಲ್ಲವೆ ಎಂದರು. 

ಕೊಜೆಂಟ್ರಿಕ್ಸ್‍ನಿಂದ ಪರಿಸರಕ್ಕೆ ಹಾನಿ, ಮತ್ಸ್ಯ ಸಂತತಿ ನಾಶ, ಮಳೆ ಅಭಾವ ಉಂಟಾಗುತ್ತದೆ ಎಂದು ಯೋಜನೆಯನ್ನು ವಿರೋಧಿಸಿದ್ದ ಬಿಜೆಪಿಯ ಯಡಿಯೂರಪ್ಪ ಅದೇ ಕಂಪೆನಿಯನ್ನು ಅದಾನಿ ಗ್ರೂಪ್ ಖರೀದಿಸಲು ಅನುಮತಿ ನೀಡಿತ್ತು. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ಮಂಗಳೂರು ಏರ್ಪೋರ್ಟ್‍ಗೆ ಕರಾವಳಿಯ ಗಾಂಧಿ ಶ್ರೀನಿವಾಸ ಮಲ್ಯರ ಹೆಸರಿಡಬೇಕೆಂಬ ಬೇಡಿಕೆಯನ್ನು ಸರಕಾರ ತಿರಸ್ಕರಿಸಿ ಅದಾನಿ ಹೆಸರಿಡಲು ಒಪ್ಪಿಗೆ ನೀಡಿದೆ. ದೇಶವನ್ನು ಲೂಟಿ ಮಾಡುವವರಿಗೆ ಬಜೆಪಿ ಮನ್ನಣೆ ನೀಡುತ್ತಿದೆ ಎಂದರು. 

ಎಸ್‍ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಕಾಂಗ್ರೆಸ್ ಮುಖಂಡ ಸಂಪತ್ ಸಾಮ್ರಾಜ್ಯ, ಬಜ್ಪೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ, ಮೂಡುಬಿದಿರೆ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಡಿ.ಎ ಉಸ್ಮಾನ್, ವಾಲ್ಪಾಡಿ ಪಂಚಾಯತ್ ಉಪಾದ್ಯಕ್ಷೆ ವಸಂತಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್,  ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ರತ್ನಾಕರ ಮೊಯ್ಲಿ ನಿರೂಪಿಸಿದರು.  

ನಾವು ಹಿಂದುಗಳು: ನಾವು ದೇವಸ್ಥಾನ, ಮಠ ಮಂದಿರಕ್ಕೆ ಹೋಗುತ್ತೇವೆ. ನಮ್ಮಲ್ಲೂ ಅಸಂಖ್ಯ ಹಿಂದೂ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದ ಒಕ್ಕಲು ಮಸೂದೆಯ ಲಾಭ ಪಡೆದವರು ಹಿಂದುಗಳೆ. ಕಾಂಗ್ರೆಸ್ ಹಿಂದೂಗಳ ಪರ ಇಲ್ಲ ಎನ್ನುವುದು ಬಿಜೆಪಿಯ ಅಪಪ್ರಚಾರಕ್ಕೆ ನಾವು ಜನರಿಗೆ ಸರಿಯಾದ ಉತ್ತರ ಕೊಡಬೇಕು

- ಅಭಯಚಂದ್ರ ಜೈನ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News