ನನ್ನ ಕೊಲೆಗೆ ಯತ್ನ: ದ.ಕ. ಜಿಲ್ಲಾ ಖಾಝಿಯಿಂದ ಪೊಲೀಸ್ ಆಯುಕ್ತರಿಗೆ ದೂರು

Update: 2020-02-27 06:23 GMT

ಮಂಗಳೂರು, ಫೆ.27: ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಕೊಲೆಗೆ ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ‌ ಮಧ್ಯೆ ಖಾಝಿ ಉಸ್ತಾದ್ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು‌ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಂಗಳೂರಿನ ನಿಕಟಪೂರ್ವ ಖಾಝಿ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮೌಲವಿ ಅವರ ನಿಗೂಢ ಮರಣಕ್ಕೆ ಸಂಬಂಧಿಸಿ ಅಲ್ಲಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ತ್ವಾಖಾ ಉಸ್ತಾದ್ ಅವರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಖಾಝಿಗೆ ವಿದೇಶಿ ಕರೆಗಳ ಮೂಲಕ ಕೊಲೆ ಬೆದರಿಕೆಗಳು ಬರುತ್ತಿತ್ತು ಎನ್ನಲಾಗಿದೆ. ಈ ಮಧ್ಯೆ ಖಾಝಿ ಅವರ ಕಾರಿನ ಹಿಂಬದಿಯ ಟಯರಿಗೆ ಚೂಪಾದ ಕತ್ತಿ ಅಥವಾ ಆಯುಧ ಮಾದರಿಯ ಕೊಕ್ಕೆಗಳನ್ನು ಸಿಲುಕಿಸಿ ಕಾರು ಚಲಿಸುತ್ತಿರುವಾಗಲೇ ಅಪಘಾತಕ್ಕೆ ಹೇತುವಾಗಲು ಪ್ರಯತ್ನ ನಡೆಸಲಾಗಿತ್ತು ಎನ್ನಲಾಗಿದೆ. ಕಾರಿನ ಟಯರಿಗೆ ಹೀಗೆ ಕತ್ತಿ ಮತ್ತಿತರ ಆಯುಧಗಳನ್ನು ಯಾರು, ಯಾವಾಗ ಅಳವಡಿಸುತ್ತಿದ್ದರು ಎಂದು ಗೊತ್ತಾಗಿಲ್ಲ. ಒಮ್ಮೆ ಬಂದರು ಪ್ರದೇಶದ ಕಾರ್ಯಕ್ರಮಕ್ಕೆ ಮತ್ತು ಇನ್ನೊಮ್ಮೆ ಹಳೆಯಂಗಡಿ ಸಮೀಪದ ಬೊಳ್ಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ ಇಂತಹ ಕುಕೃತ್ಯ ನಡೆಸಿ ಖಾಝಿಯ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಕೆಲವು ಸಮಯದಿಂದ ತಂಡವೊಂದು ಹಿಂಬಾಲಿಸಿ ಹತ್ಯೆಗೆ ಸಂಚು ಹೂಡಿದೆ ಎಂದು ಖಾಝಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ದೂರನ್ನು ಸ್ವೀಕರಿಸಿದ್ದು, ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News