'ಅಮೆರಿಕ ಚುನಾವಣೆಯಲ್ಲಿ ಪಾತ್ರ': ಟ್ರಂಪ್ ಎದುರಾಳಿ ಬರ್ನೀ ಸ್ಯಾಂಡರ್ಸ್ ಗೆ ಬಿ.ಎಲ್. ಸಂತೋಷ್ ಬೆದರಿಕೆ !

Update: 2020-02-27 08:14 GMT

ಹೊಸದಿಲ್ಲಿ: 'ದಿಲ್ಲಿ ಹಿಂಸಾಚಾರದ ಬಗ್ಗೆ ಕೇಳಿದ್ದೇನೆ. ಆದರೆ ಅದರ ಕುರಿತು ಅವರ (ಮೋದಿ) ಜತೆ ಚರ್ಚಿಸಿಲ್ಲ, ಅದು ಭಾರತಕ್ಕೆ ಬಿಟ್ಟಿದ್ದು' ಎಂಬ ಹೇಳಿಕೆ ನೀಡಿದ ಡೊನಾಲ್ಡ್ ಟ್ರಂಪ್ ರನ್ನು ಟೀಕಿಸಿ ಇಂದು ಅಮೆರಿಕಾದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಲಿರುವ ಬರ್ನೀ ಸ್ಯಾಂಡರ್ಸ್ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ನಂತರ ತಮ್ಮ ಟ್ವೀಟನ್ನು ಡಿಲಿಟ್ ಮಾಡಿದ್ದಾರೆ.

ಭಾರತ ಭೇಟಿಯ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜಧಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಬಲಿಯಾದ ಘಟನೆಯು ಕುರಿತು ಉಲ್ಲೇಖಿಸುತ್ತಾ 'ಅದರ ಬಗ್ಗೆ ಕೇಳಿದ್ದೇನೆ. ಆದರೆ ಅದರ ಕುರಿತು ಅವರ (ಮೋದಿ) ಜತೆ ಚರ್ಚಿಸಿಲ್ಲ, ಅದು ಭಾರತಕ್ಕೆ ಬಿಟ್ಟಿದ್ದು'' (ದ್ಯಾಟ್ಸ್ ಅಪ್ ಟು ಇಂಡಿಯಾ) ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಬರ್ನೀ ಸ್ಯಾಂಡರ್ಸ್, "ಇದು ಮಾನವ ಹಕ್ಕುಗಳ ಕುರಿತಂತೆ ನಾಯಕತ್ವ ವೈಫಲ್ಯ'' ಎಂದು ಹೇಳಿದ್ದರು.

ಬರ್ನೀ ಸ್ಯಾಂಡರ್ಸ್ ಅವರ ಟ್ವೀಟ್ ಹೀಗಿತ್ತು- "200 ಮಿಲಿಯನ್‍ಗೂ ಅಧಿಕ ಮುಸ್ಲಿಮರು ಭಾರತವನ್ನು ತಮ್ಮ ಮನೆಯೆಂದು ಕರೆಯುತ್ತಾರೆ, ಮುಸ್ಲಿಂ ವಿರೋಧಿ ಗುಂಪು ಹಿಂಸಾಚಾರ ಕನಿಷ್ಠ 27 ಜನರನ್ನು ಬಲಿ ಪಡೆದು ಇನ್ನೂ ಹಲವರನ್ನು ಗಾಯಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿ ಟ್ರಂಪ್ `ಅದು ಭಾರತಕ್ಕೆ ಬಿಟ್ಟಿದ್ದು' ಎನ್ನುತ್ತಾರೆ, ಇದು ಮಾನವ ಹಕ್ಕುಗಳ ಕುರಿತಂತೆ ನಾಯಕತ್ವ ವೈಫಲ್ಯ'' ಎಂದು  ಟ್ವೀಟ್ ಮಾಡಿದ್ದರು.

ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ ಎಲ್ ಸಂತೋಷ್ ಅವರ ಉತ್ತರ ಹೀಗಿತ್ತು. "ನಾವೆಷ್ಟೇ ತಟಸ್ಥರಾಗಿರಲು ಬಯಸಿದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾತ್ರ ವಹಿಸುವಂತೆ ಮಾಡಲು ನೀವು ಅನಿವಾರ್ಯಗೊಳಿಸುತ್ತಿದ್ದೀರಿ. ಹೀಗೆ ಹೇಳಲು ವಿಷಾದವಿದೆ. ಆದರೆ ನೀವು ಅನಿವಾರ್ಯಗೊಳಿಸುತ್ತಿದ್ದೀರಿ'' ಎಂದು ಬರೆದಿದ್ದರು. ಆದರೆ ಆನಂತರ ಈ ಟ್ವೀಟ್ ಡಿಲಿಟ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News