ಅಗ್ರಸ್ಥಾನ ಭದ್ರಪಡಿಸಿಕೊಂಡ ಪುಣೆ

Update: 2020-02-27 18:21 GMT

ಭುವನೇಶ್ವರ, ಫೆ.27: ಮೊದಲ ಆವೃತ್ತಿಯ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ಗುರುವಾರ ಮೂರು ಚಿನ್ನದ ಪದಕ ಬಾಚಿಕೊಂಡ ಸಾವಿತ್ರಿಬಾಯಿ ಫುಲೆ ಪುಣೆ ವಿವಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹೇಶ್ ದತ್ತ ಅಸವಲೆ ಹಾಗೂ ಪ್ರಜಕ್ತಾ ರವೀಂದ್ರ ಖಾಲ್ಕರ್ ಚಿನ್ನದ ಪದಕ ಜಯಿಸಿದರೆ, ಜ್ಯೋತಿಬಾ ಬಜರಂಗ ಅಟ್ಕಾಲೆ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡರು.

 ಪಂಜಾಬ್ ಯುನಿವರ್ಸಿಟಿ(ಚಂಡಿಗಡ) ಹಾಗೂ ಜೈನ್ ಯುನಿವರ್ಸಿಟಿ(ಬೆಂಗಳೂರು)ತಲಾ 8 ಚಿನ್ನದ ಪದಕ ಗೆದ್ದುಕೊಂಡಿವೆ. ಪುಣೆ ವಿಶ್ವವಿದ್ಯಾಲಯ 13 ಚಿನ್ನ ಗೆದ್ದುಕೊಂಡು ಅಗ್ರಸ್ಥಾನದಲ್ಲಿದೆ.

 ಗುರುನಾನಕ್ ದೇವ್ ಯುನಿವರ್ಸಿಟಿ(ಅಮೃತಸರ) ಹಾಗೂ ಮುಂಬೈ ಯುನಿವರ್ಸಿಟಿ ಪದಕಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಅಖಿಲ ಭಾರತ ಅಂತರ್ ವಿವಿ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 258 ಕೆಜಿ ಭಾರ ಎತ್ತಿ ಹಿಡಿದು ಮಹೇಶ್ ಪ್ರಶಸ್ತಿ ಜಯಿಸಿದ್ದರು. ಒಟ್ಟು 266 ಕೆಜಿ(ಸ್ನಾಚ್ 123 ಕೆಜಿ+ಕ್ಲೀನ್-ಜರ್ಕ್ 143)ಭಾರ ಎತ್ತಿದ ಮಹೇಶ್ ಇದೀಗ ತನ್ನ ಹಿಂದಿನ ಪ್ರದರ್ಶನ ಉತ್ತಮಪಡಿಸಿಕೊಂಡರು.

ಕ್ರಮವಾಗಿ 243ಕೆಜಿ ಹಾಗೂ 238 ಕೆಜಿ ಭಾರ ಎತ್ತಿದ ಕೋಟೇಶ್ವರ ರಾವ್(ಕೃಷ್ಣ ವಿವಿ)ಹಾಗೂ ಮಿಥ್ಲೇಶ್ ಸೋನ್ಕರ್(ಹೇಮಚಂದ ಯಾದವ್ ಯುನಿವರ್ಸಿಟಿ)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News