ಟ್ವೆಂಟಿ-20 ಸರಣಿ ಗೆದ್ದ ಆಸ್ಟ್ರೇಲಿಯ

Update: 2020-02-27 18:28 GMT

ಕೇಪ್‌ಟೌನ್, ಫೆ.27: ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸ್ವದೇಶದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಬಳಿಕ ಹರಿಣ ಪಡೆ ತವರು ನೆಲದಲ್ಲಿ ಸತತ ನಾಲ್ಕನೇ ಸರಣಿ ಗೆಲ್ಲಲು ವಿಫಲವಾಗಿದೆ.

  ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ, ಐವರು ಬೌಲರ್‌ಗಳು ಸಾಕಷ್ಟು ರನ್ ಸೋರಿಕೆ ಮಾಡಿದರು. ಆತಿಥೇಯರ ದುರ್ಬಲ ಬೌಲಿಂಗ್‌ನ ಲಾಭ ಪಡೆದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 193 ರನ್ ಕಲೆ ಹಾಕಲು ಯಶಸ್ವಿಯಾಯಿತು. ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(57, 37 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ಆ್ಯರೊನ್ ಫಿಂಚ್(55, 37 ಎಸೆತ, 6 ಬೌಂಡರಿ, 1 ಸಿಕ್ಸರ್)ಅರ್ಧಶತಕ ಸಿಡಿಸಿದ್ದಲ್ಲದೆ ಮೊದಲ ವಿಕೆಟ್ ಜೊತೆಯಾಟದಲ್ಲಿ 120 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಗೆಲ್ಲಲು ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ಮಿಚೆಲ್ ಸ್ಟಾರ್ಕ್(3-23)ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 15.3 ಓವರ್‌ಗಳಲ್ಲಿ ಕೇವಲ 96 ರನ್ ಗಳಿಸಿ ಆಲೌಟಾಯಿತು. ಸ್ಪಿನ್ನರ್‌ಗಳಾದ ಆ್ಯಶ್ಟನ್ ಅಗರ್(3-16) ಹಾಗೂ ಆ್ಯಡಮ್ ಝಾಂಪ(2-10)ಐದು ವಿಕೆಟ್ ಉರುಳಿಸಿ ಸ್ಟಾರ್ಕ್ ಗೆ ಸಾಥ್ ನೀಡಿದರು. ಆಫ್ರಿಕಾ ಪಾಳಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ವಾಂಡರ್ ಡುಸ್ಸಾನ್(24)ಸರ್ವಾಧಿಕ ಸ್ಕೋರ್ ಗಳಿಸಿದರು. ಕ್ಲಾಸೆನ್(22), ಡೇವಿಡ್ ಮಿಲ್ಲರ್(15) ಹಾಗೂ ಪ್ರಿಟೋರಿಯಸ್(11)ಎರಡಂಕೆಯ ಸ್ಕೋರ್ ಗಳಿಸಿದರು.

 ದಕ್ಷಿಣ ಆಫ್ರಿಕಾ ಮೂರನೇ ಓವರ್‌ನಲ್ಲಿ 23 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. 10ನೇ ಓವರ್ ಅಂತ್ಯಕ್ಕೆ 65 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಪತನಗೊಂಡವು. ಆಸ್ಟ್ರೇಲಿಯ 5.3 ಓವರ್‌ಗಳಲ್ಲಿ ದ.ಆಫ್ರಿಕಾ

ದ ಉಳಿದ ಐದು ವಿಕೆಟ್‌ಗಳನ್ನು ಉರುಳಿಸಲು ಶಕ್ತವಾಯಿತು. ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೇ ಹೀನಾಯ ಸೋಲುಂಡಿತು. ದಕ್ಷಿಣ ಆಫ್ರಿಕಾ ಸರಣಿಯುದ್ದಕ್ಕೂ ನಿರಾಶಾದಾಯಕ ಪ್ರದರ್ಶನ ನೀಡಿದೆ. ಆರು ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್‌ಗಳ ಪೈಕಿ ಒಬ್ಬರೂ ಒಟ್ಟು 100 ರನ್ ದಾಟಲಿಲ್ಲ. ನಾಯಕ ಕ್ವಿಂಟನ್ ಡಿಕಾಕ್ ಮಾತ್ರ 70ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸರಣಿಯಲ್ಲಿ ಆಡಿದ್ದ 3 ಪಂದ್ಯಗಳಲ್ಲಿ ಸ್ಪಿನ್ನರ್‌ಗಳಾದ ಅಗರ್ ಹಾಗೂ ಝಾಂಪ ವಿರುದ್ಧ ಪರದಾಟ ನಡೆಸಿದ್ದ ದಕ್ಷಿಣ ಆಫ್ರಿಕಾ ಸ್ಪಿನ್ ಬೌಲಿಂಗ್‌ನಲ್ಲಿ 129 ಎಸೆತ ಎದುರಿಸಿ 125 ರನ್ ಗಳಿಸಿದ್ದು,13 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಕ್ಕೆ ವಾರ್ನರ್ ಹಾಗೂ ಫಿಂಚ್ 11.3 ಓವರ್‌ಗಳಲ್ಲಿ 120 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆಸ್ಟ್ರೇಲಿಯ 200ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ, ದಕಿ  ್ಷಣ ಆಫ್ರಿಕಾ ಬೌಲರ್‌ಗಳು ಆಸ್ಟ್ರೇಲಿಯವನ್ನು 200ರೊಳಗೆ ನಿಯಂತ್ರಿಸಿದರು. ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿದ್ದ ಆತಿಥೇಯರಿಗೆ 196 ರನ್ ದೊಡ್ಡ ಸವಾಲಾಗಿ ಪರಿಣಮಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News