ದಿಲ್ಲಿ ಶಾಲೆ ಮೇಲೆ ದಾಳಿ ನಡೆಸಿ ಪೀಠೋಪಕರಣ,ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು!

Update: 2020-02-28 08:36 GMT

ಹೊಸದಿಲ್ಲಿ, ಫೆ.28: ಈಶಾನ್ಯ ದಿಲ್ಲಿಯ ಶಿವ ವಿಹಾರ ಪ್ರದೇಶದಲ್ಲಿರುವ ಶಾಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ಶಾಲೆಯ ಪೀಠೋಪಕರಣ ಹಾಗೂ ಪುಸ್ತಕಗಳಿಗೆ ಬೆಂಕಿ ಹಚ್ಚಿಸಿದ್ದಲ್ಲದೆ, ಇದೇ ಶಾಲೆಯ ಕಟ್ಟಡದ ಮೇಲೆ ನಿಂತು 24 ಗಂಟೆಗಳ ಕಾಲ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ದಾಳಿ ನಡೆಸಿದೆ.

ದಾಳಿಕೋರರು ಪಕ್ಕದ ಕಟ್ಟಡದಿಂದ(ಅದೂ ಕೂಡ ಶಾಲೆ)ಹಗ್ಗವನ್ನು ಬಳಸಿ ಶಾಲೆಯ ಆವರಣ ಪ್ರವೇಶಿಸಿದ್ದರು. ಶಾಲೆಯ ಕಪ್ಪು ಫಲಕಗಳನ್ನು ನಾಶಗೊಳಿಸಿದ್ದಲ್ಲದೆ, ಶಾಲಾ ಪೀಠೋಪಕರಣ ಧ್ವಂಸಗೊಳಿಸಿದ್ದರು ಹಾಗೂ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ್ದರು ಎಂದು ಶಿವವಿಹಾರದ ಡಿಆರ್‌ಪಿ ಕಾನ್ವೆಂಟ್ ಶಾಲೆಯ ಆಡಳಿತ ಮುಖ್ಯಸ್ಥ ಧರ್ಮೇಶ್ ಶರ್ಮಾ ಹೇಳಿದ್ದಾರೆ. ಈ ಶಾಲೆಯಲ್ಲಿ 1,000ಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದರು.

ಸೋಮವಾರ ಈ ಶಾಲೆಯ ಮೇಲೆ ದಾಳಿ ನಡೆದಿತ್ತು. ಆಗ ಮಕ್ಕಳು ಪರೀಕ್ಷೆ ಬರೆದು ಮನೆಗೆ ತೆರಳಿದ್ರು. ‘‘ನಮ್ಮ ಶಾಲೆ 24 ಗಂಟೆಗಳ ಕಾಲ ಬೆಂಕಿಯಲ್ಲಿ ಬೆಂದುಹೋಗಿತ್ತು. ಅಗ್ನಿ ಶಾಮಕ ದಳದವರು ಬರಲಿಲ್ಲ. ಅಗ್ನಿಶಾಮಕದಳದ ಅಧಿಕಾರಿಗಳ ಮೇಲೂ ದಾಳಿ ನಡೆಸಲಾಗಿತ್ತು. ಪೊಲೀಸರು ಘಟನೆ ನಡೆದು 3 ದಿನಗಳ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ನಿನ್ನೆಯಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ’’ಎಂದು ಶರ್ಮಾ ಹೇಳಿದ್ದಾರೆ.

ಡಿಆರ್‌ಪಿ ಕಾನ್ವೆಂಟ್ ಸ್ಕೂಲ್‌ಗೆ ತಾಗಿಕೊಂಡಿದ್ದ ರಾಜಧಾನಿ ಸ್ಕೂಲ್ ಮೊದಲಿಗೆ ದಾಳಿಗೆ ತುತ್ತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News