ಗಾಂಧೀಜಿ ಆಶಯಗಳು ಈಗ ಹೆಚ್ಚು ಅಗತ್ಯ: ದಿಲ್ಲಿ ಹಿಂಸಾಚಾರ ಕುರಿತು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಗುಟೆರಸ್

Update: 2020-02-28 15:35 GMT

 ವಿಶ್ವಸಂಸ್ಥೆ, ಫೆ.28: ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಖೇದ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್, ಮಹಾತ್ಮಾ ಗಾಂಧೀಜಿಯವರ ಚಿಂತನೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಹೇಳಿದ್ದಾರೆ.

 ಸಮುದಾಯದ ನಡುವೆ ನಿಜವಾದ ಸಾಮರಸ್ಯ ಪರಿಸ್ಥಿತಿ ನಿರ್ಮಾಣವಾಗಲು ಮಹಾತ್ಮಾ ಗಾಂಧೀಜಿಯವರ ಚಿಂತನೆ ಅತ್ಯಗತ್ಯವಾಗಿದೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಂಭವಿಸಿದ ಸಾವು ನೋವನ್ನು ಕಂಡು ದುಖವಾಗಿದೆ. ಹಿಂಸಾಚಾರ ಕೊನೆಯಾಗಲು ಗರಿಷ್ಟ ಸಂಯಮ ವಹಿಸುವ ಅಗತ್ಯವಿದೆ ಎಂದು ಗುಟೆರಸ್ ಹೇಳಿದ್ದಾರೆ.

ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲು ಜನತೆಗೆ ಅವಕಾಶ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಗುಟೆರಸ್, ಭದ್ರತಾ ಪಡೆಗಳು ಗರಿಷ್ಟ ಸಂಯಮ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜರಿಕ್ ‘ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಅಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಗುಟೆರಸ್ ನಿಕಟವಾಗಿ ಗಮನಿಸುತ್ತಿದ್ದಾರೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಘಟನೆಯಲ್ಲಿ ಆಗಿರುವ ಸಾವು-ನೋವು, ನಾಶ ನಷ್ಟಗಳ ವರದಿ ಬಗ್ಗೆ ತೀವ್ರ ದುಖ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿಯವರು ಮಹಾತ್ಮಾ ಗಾಂಧೀಜಿಯವರ ಜೀವನ ಮೌಲ್ಯ ಮತ್ತು ಚಿಂತನೆಗಳಿಂದ ತೀವ್ರ ಪ್ರಭಾವಿತರಾದವರು. ಈಗ ಸಮುದಾಯದಲ್ಲಿ ನಿಜವಾದ ಸಾಮರಸ್ಯ ನೆಲೆಸಬೇಕಿದ್ದರೆ ಗಾಂಧೀಜಿಯವರ ಚಿಂತನೆ ಈ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ ಎಂಬ ಅಭಿಪ್ರಾಯ ಅವರದ್ದಾಗಿದೆ ಎಂದು ಡುಜರಿಕ್ ಹೇಳಿದ್ದಾರೆ.

 ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ಕಾಯ್ದೆ ಪರ ಮತ್ತು ವಿರೋಧಿ ಗುಂಪುಗಳ ಮಧ್ಯೆ ಆರಂಭವಾದ ಘರ್ಷಣೆ ಹಿಂಸಾರೂಪಕ್ಕೆ ತಿರುಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕಿಡಿಗೇಡಿಗಳು ಹಲವು ಮನೆ, ಶಾಲೆ, ವಾಹನಗಳಿಗೆ ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News