ರಾಕೇಶ್ ಅಸ್ತಾನಾ ಲಂಚ ಪ್ರಕರಣದಲ್ಲಿ ‘ದೊಡ್ಡ ವ್ಯಕ್ತಿಗಳ ರಕ್ಷಣೆ’: ಮಾಜಿ ತನಿಖಾಧಿಕಾರಿ ಆರೋಪ

Update: 2020-02-28 13:43 GMT
ಫೈಲ್ ಚಿತ್ರ

ಹೊಸದಿಲ್ಲಿ, ಫೆ.28: ಸಿಬಿಐಯ ಹಿರಿಯ ಅಧಿಕಾರಿಗಳು ಒಳಗೊಂಡಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ದಿಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಶುಕ್ರವಾರ ಇಬ್ಬರು ತನಿಖಾ ಅಧಿಕಾರಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿರುವುದಾಗಿ ವರದಿಯಾಗಿದೆ.

ಪ್ರಕರಣದ ದೈನಂದಿನ ತನಿಖೆಯ ಮಾಹಿತಿ ನೀಡಲು ನ್ಯಾಯಾಲಯದ ಎದುರು ಹಾಜರಾಗುವಂತೆ ಮಾಜಿ ತನಿಖಾಧಿಕಾರಿ ಅಜಯ್ ಕುಮಾರ್ ಬಸ್ಸಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಹೇಳಿಕೆ ನೀಡಿದ ಬಸ್ಸಿ, ಈಗಿನ ತನಿಖಾಧಿಕಾರಿ ಸತೀಶ್ ದಗಾರ್ ಕೆಲವು ದೊಡ್ಡ ವ್ಯಕ್ತಿಗಳನ್ನು ರಕ್ಷಿಸುತ್ತಿದ್ದಾರೆ . 2018ರ ಅಕ್ಟೋಬರ್‌ನಲ್ಲಿ ನಡೆಸಿದ್ದ ವಿಚಾರಣೆ ಸಂದರ್ಭ ಮುಖ್ಯ ಆರೋಪಿ ಮನೋಜ್ ಪ್ರಸಾದ್ ಕೆಲವು ಹೆಸರುಗಳನ್ನು ಬಾಯಿಬಿಟ್ಟಿದ್ದರೂ ಸತೀಶ್ ದಗಾರ್ ಇವರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ಬಸ್ಸಿ ಆರೋಪಿಸಿದರು.

ಇದರಿಂದ ತೀವ್ರ ಆಕ್ರೋಶಿತರಾದ ದಗಾರ್, “ವೈಯಕ್ತಿಕ ಆರೋಪ ಹೊರಿಸಬೇಡಿ. ನಿಮಗೆ ನಾನು 6 ಬಾರಿ ಸಮನ್ಸ್ ಕಳಿಸಿದ್ದೇನೆ. ನೀವು ಯಾಕೆ ತನಿಖೆಗೆ ಸಹಕರಿಸುತ್ತಿಲ್ಲ” ಎಂದು ಪ್ರಶ್ನಿಸಿದರು. “2018ರ ಅಕ್ಟೋಬರ್ 15ರಿಂದ 23ರವರೆಗೆ ಮಾತ್ರ ತನಿಖೆ ನಡೆಸಿದ್ದ ಬಸ್ಸಿಗೆ ಸಿಬಿಐಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಹೇಗೆ ದೊರಕುತ್ತಿದೆ. ಅವರು ನಮ್ಮ ತನಿಖಾ ಪ್ರಕ್ರಿಯೆಯ ಒಳಗೆ ನುಸುಳಿದ್ದಾರೆಯೇ ಎಂದು ಅವರನ್ನೇ ಪ್ರಶ್ನಿಸಬೇಕಿದೆ” ಎಂದರು.

 ಅಲ್ಲದೆ ಬಸ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಹೊಸ ದಾಖಲೆಗೆ ಆಕ್ಷೇಪ ಎತ್ತಿದ ದಗಾರ್ ಮತ್ತು ಸಿಬಿಐಯ ವಕೀಲರು, ತನಿಖಾ ಪ್ರಕ್ರಿಯೆಯ ಭಾಗವಾಗಿರದ ಹೊಸ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಸರಿಯಲ್ಲ ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ ಬಸ್ಸಿ, ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ದೋಷಾರೋಪಣೆಗೆ ಪೂರಕವಾದ ಪುರಾವೆಗಳಿವೆ. ಆದರೂ ಅಸ್ತಾನಾರ ಫೋನ್ ಹಾಗೂ ಇತರ ವಿದ್ಯುನ್ಮಾನ ಸಾಕ್ಷಿಗಳನ್ನು ದಗಾರ್ ಇನ್ನೂ ಜಪ್ತಿ ಮಾಡಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್, ಖಾಸಗಿಯಾಗಿರಬೇಕಿದ್ದ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ. ನೀವಿಬ್ಬರೂ ವ್ಯಕ್ತಿಗಿಂತ ದೊಡ್ಡದಾದ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೀರಿ ಎಂದು ಹೇಳಿದರಲ್ಲದೆ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ನಿಗದಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News