ತಿರುವನಂತಪುರ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಒಪ್ಪಿಸುವುದನ್ನು ಪ್ರಶ್ನಿಸಿದ್ದ ಅರ್ಜಿ ವಾಪಸ್ ಹೈಕೋರ್ಟ್‌ಗೆ

Update: 2020-02-28 13:58 GMT

ಹೊಸದಿಲ್ಲಿ,ಫೆ.28: ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕುಗಳನ್ನು ಅದಾನಿ ಸಮೂಹಕ್ಕೆ ಒಪ್ಪಿಸುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ ಪ್ರಸ್ತಾವನೆಯನ್ನು ಪ್ರಶ್ನಿಸಿ ರಾಜ್ಯ ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇರಳ ಉಚ್ಚ ನ್ಯಾಯಾಲಯಕ್ಕೆ ಮರಳಿಸಿದೆ.

 ಕೇರಳ ಸರಕಾರ ಮತ್ತು ಇತರ ಕಕ್ಷಿದಾರರ ಹೇಳಿಕೆಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಈ ನಿರ್ಧಾರವನ್ನು ಪ್ರಕಟಿಸಿತು.

ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ 131ರ ಅನ್ವಯಸಾಧ್ಯತೆಯ ವಿವಾದವು ಅಗತ್ಯವಾದರೆ ಇನ್ನಷ್ಟು ವಿಚಾರಣೆಗೆ ಮುಕ್ತವಾಗಿರುತ್ತದೆ ಎಂದೂ ಪೀಠವು ತಿಳಿಸಿತು.

ಮುಂದಿನ 50 ವರ್ಷಗಳಿಗೆ ತಿರುವನಂತಪುರ ವಿಮಾನ ನಿಲ್ದಾಣದ ನಿರ್ವಹಣೆ ಹಕ್ಕುಗಳನ್ನು ಅದಾನಿ ಎಂಟರ್‌ಪ್ರೈಸಸ್ ಲಿ.ಗೆ ನೀಡುವ ಎಎಐ ಪ್ರಸ್ತಾವನೆಯನ್ನು ರಾಜ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕೇರಳ ಸರಕಾರವು ಬಳಿಕ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಕಳೆದ ವರ್ಷದ ಡಿಸೆಂಬರ್ 18ರಂದು ಕೇರಳ ಉಚ್ಚ ನ್ಯಾಯಾಲಯವು ಅಂಗೀಕಾರಾರ್ಹವಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು. ಅರ್ಜಿಯಲ್ಲಿ ಎತ್ತಲಾಗಿರುವ ಪ್ರಶ್ನೆಯನ್ನು ವಿಧಿ 131ರಡಿ ಸರ್ವೋಚ್ಚ ನ್ಯಾಯಾಲಯವು ಇತ್ಯರ್ಥಗೊಳಿಸಬೇಕಾಗುತ್ತದೆ ಎಂದು ಅದು ತಿಳಿಸಿತ್ತು.

 ವಿಮಾನ ನಿಲ್ದಾಣಗಳನ್ನು ನಿರ್ವಹಿಸಿದ ಪೂರ್ವಾನುಭವ ಇಲ್ಲದ ಖಾಸಗಿ ಸಂಸ್ಥೆಗೆ ತಿರುವನಂತಪುರ ವಿಮಾನ ನಿಲ್ದಾಣವನ್ನು ಹಸ್ತಾಂತರಿಸುವ ಎಎಐ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಕಾಯ್ದೆ,1994ನ್ನು ಉಲ್ಲಂಘಿಸಿದೆ ಎಂದು ರಾಜ್ಯ ಸರಕಾರವು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಿತ್ತು.

1932ರಲ್ಲಿ ಅಂದಿನ ತಿರುವಾಂಕೂರು ಸಂಸ್ಥಾನಕ್ಕೆ ಸೇರಿದ್ದ 258.06 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗಿದ್ದು,ಕಂದಾಯ ದಾಖಲೆಗಳಲ್ಲಿ ಸರಕಾರಿ ಭೂಮಿ ಎಂದು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News