ದಿಲ್ಲಿ ಹಿಂಸಾಚಾರದ ವಿಷಯವನ್ನು ಭಾರತದೊಂದಿಗೆ ಉನ್ನತ ಮಟ್ಟದಲ್ಲಿ ಪ್ರಸ್ತಾವಿಸಿದ್ದೇವೆ: ಅಮೆರಿಕ ಹೇಳಿಕೆ

Update: 2020-02-28 14:09 GMT
ಫೈಲ್ ಚಿತ್ರ

ವಾಷಿಂಗ್ಟನ್, ಫೆ.28: ಶಾಂತರೀತಿಯಲ್ಲಿ ಸಭೆ ಸೇರಲು ಜನರಿಗೆ ಇರುವ ಹಕ್ಕನ್ನು ರಕ್ಷಿಸಿ ಗೌರವಿಸಬೇಕು ಮತ್ತು ದಿಲ್ಲಿ ಹಿಂಸಾಚಾರಕ್ಕೆ ಹೊಣೆಗಾರರನ್ನು ಗುರುತಿಸಿ ಅಪರಾಧಿ ಸ್ಥಾನದಲ್ಲಿರಿಸಬೇಕು ಎಂದು ಭಾರತವನ್ನು ಆಗ್ರಹಿಸಿರುವ ಅಮೆರಿಕ, ಈ ವಿಷಯವನ್ನು ಭಾರತದೊಂದಿಗೆ ಉನ್ನತ ಮಟ್ಟದಲ್ಲಿ ಪ್ರಸ್ತಾವಿಸಲಾಗಿದೆ ಎಂದು ಹೇಳಿದೆ.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಜನರಿಗೆ ಶಾಂತರೀತಿಯಲ್ಲಿ ಸಭೆ ಸೇರುವ ಅಧಿಕಾರವನ್ನು ಗೌರವಿಸುವಂತೆ ಆಗ್ರಹಿಸುತ್ತೇವೆ. ಶಾಂತಿ ಕಾಪಾಡುವಂತೆ ಮತ್ತು ಹಿಂಸೆಯಿಂದ ದೂರವಿರುವಂತೆ ಎಲ್ಲರಿಗೂ ಮನವಿ ಮಾಡುತ್ತೇವೆ . ಭಾರತದೊಂದಿಗೆ ಉನ್ನತ ಮಟ್ಟದಲ್ಲಿ ಈ ವಿಷಯ ಪ್ರಸ್ತಾವಿಸಿದ್ದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಸರಕಾರದೊಂದಿಗೆ ಮಾತುಕತೆ ಮುಂದುವರಿಸುತ್ತೇವೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಕಾನೂನಿನಡಿ ಎಲ್ಲರನ್ನೂ ಸಮಾನರಾಗಿ ಕಾಣುವುದು ಎರಡೂ ಪ್ರಜಾಪ್ರಭುತ್ವ ದೇಶಗಳ ಮೂಲಭೂತ ಸಿದ್ಧಾಂತವಾಗಿದೆ. ಶಾಂತಿ ಕಾಪಾಡುವಂತೆ ಪ್ರಧಾನಿ ಮೋದಿ ಮಾಡಿರುವ ಮನವಿ ಹಾಗೂ ಮತ್ತಷ್ಟು ಹಿಂಸಾಚಾರ ನಡೆಯದಂತೆ ತಡೆಯುವ, ಸಹಜ ಸ್ಥಿತಿ ಮರಳಿಸುವ ಬಗ್ಗೆ ಭಾರತ ಸರಕಾರದ ವಾಗ್ದಾನವನ್ನು ಅಮೆರಿಕ ಗಮನಿಸಿದೆ ಎಂದವರು ಹೇಳಿದ್ದಾರೆ.

ಒಳಗೊಳ್ಳುವಿಕೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುವ ಮೂಲಕವಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಟಗೊಳಿಸಬಹುದು . ಭಾರತವು ವಿಶ್ವದ ಅತೀ ದೊಡ್ಡ ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಹಿಂಸಾಚಾರ, ಮುಸ್ಲಿಮರ ನಾಗರಿಕ ಸ್ವಾತಂತ್ರ್ಯದ ರದ್ದತಿ ಮತ್ತಿತರ ವಿಷಯಗಳು ಭಾರತದ ಪ್ರತಿಷ್ಟೆಯನ್ನು ಕುಂದಿಸುತ್ತದೆ ಮತ್ತು ವ್ಯಾಪಕ ಸಂಘರ್ಷದ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಡೆಮೊಕ್ರಾಟ್ ಪಕ್ಷದ ಮುಖಂಡ ಕಾಲಿನ್ ಆಲ್ರೆಡ್ ಹೇಳಿದ್ದಾರೆ. ಅಲ್ಲದೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಹಿಂಸಾಚಾರದ ಬಗ್ಗೆ ಸಾರ್ವಜನಿಕವಾಗಿ ಆತಂಕ ವ್ಯಕ್ತಪಡಿಸುವಲ್ಲಿ ಅಧ್ಯಕ್ಷ ಟ್ರಂಪ್‌ರ ವೈಫಲ್ಯವನ್ನು ಟೀಕಿಸಿದರು.

 ಪ್ರಜಾಪ್ರಭುತ್ವ ಸಿದ್ಧಾಂತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಸಹಿತ ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅಮೆರಿಕ ಮುಂದಾಳತ್ವ ವಹಿಸಬೇಕು . ದಿಲ್ಲಿ ಹಿಂಸಾಚಾರವನ್ನು ಖಂಡಿಸುವಂತೆ ಹಾಗೂ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡದೆ ಎಲ್ಲಾ ಪ್ರಜೆಗಳ ರಕ್ಷಣೆಗೆ ಬದ್ಧವಾಗಿರುವಂತೆ ಭಾರತ ಸರಕಾರದ ಮೇಲೆ ಒತ್ತಡ ಹಾಕಬೇಕೆಂದು ಟ್ರಂಪ್ ಆಡಳಿತ ಮತ್ತು ಇತರ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸುವುದಾಗಿ ಅವರು ಹೇಳಿದ್ದಾರೆ.

ಭಾರತೀಯ ಸಮಾಜದ ಉನ್ನತ ಮಟ್ಟದಿಂದ ಹೊರಹೊಮ್ಮುವ ದ್ವೇಷ ಭಾಷಣ ಮತ್ತು ಮುಸ್ಲಿಂ ವಿರೋಧಿ ಕಾನೂನಿನಿಂದ ಪ್ರೇರಣೆಗೊಂಡ ಸಂಪ್ರದಾಯವಾದಿಗಳ ದಾಳಿಯನ್ನು ಅಮೆರಿಕ ಸಹಿತ ಅಂತರಾಷ್ಟ್ರೀಯ ಸಮುದಾಯ ವಿರೋಧಿಸಬೇಕು ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್ (ಸಿಎಐಆರ್) ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಸರಕಾರ ವಿಭಜನಾತ್ಮಕ ವಿಷಯಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು, ಪ್ರಜೆಗಳ ಸುರಕ್ಷತೆಯನ್ನು ಖಾತರಿಪಡಿಸುವ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್(ಐಒಸಿ) ನ ಉಪಾಧ್ಯಕ್ಷ ಜಾರ್ಜ್ ಅಬ್ರಹಾಂ ಒತ್ತಾಯಿಸಿದ್ದಾರೆ. ಮೋದಿ ಸರಕಾರ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಮತ್ತು ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಐಒಸಿ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಆಗ್ರಹಿಸಿದ್ದಾರೆ.

ಭಾರತದ ಪ್ರತಿಷ್ಠೆ ಮಣ್ಣುಪಾಲು: ನೀರಾ ಟಂಡನ್

ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರ ಭಯಾನಕವಾಗಿದ್ದು ಏಶ್ಯಾದಲ್ಲಿ ಪ್ರಜಾಪ್ರಭುತ್ವದ ಹೆಗ್ಗುರುತು ಎಂಬ ಭಾರತದ ಪ್ರತಿಷ್ಠೆಯನ್ನು ಮಣ್ಣುಪಾಲಾಗಿಸಿದೆ ಎಂದು ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ಸಂಸ್ಥೆಯ ಮುಖ್ಯಸ್ಥೆ, ಭಾರತೀಯ ಅಮೆರಿಕನ್ ನೀರಾ ಟಂಡನ್ ಹೇಳಿದ್ದಾರೆ. ನಮ್ಮ ಕಲ್ಪನೆಯ ಭಾರತ ಅತ್ಯಂತ ಕೆಟ್ಟದಾಗಿ ಬದಲಾಗುತ್ತಿದೆ. ಮೋದಿ ಸರಕಾರದ ಕ್ರಮಗಳು ಈ ಪರಿಸ್ಥಿತಿಯನ್ನು ನಿರ್ಮಿಸಿದ್ದು ಇದಕ್ಕೆ ಅಂತ್ಯ ಹೇಳಬೇಕು ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News