ದಿಲ್ಲಿ ಹಿಂಸಾಚಾರ: ದುಷ್ಕರ್ಮಿಗಳ ದಾಳಿಯಿಂದ ಶಿವದೇವಾಲಯವನ್ನು ರಕ್ಷಿಸಲು ಒಗ್ಗಟ್ಟಾದ ಹಿಂದೂ-ಮುಸ್ಲಿಮರು

Update: 2020-02-28 16:00 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದ ಸಂದರ್ಭ ಮುಸ್ಲಿಮರು ಹಾಗೂ ಹಿಂದೂಗಳು ಒಗ್ಗಟ್ಟಾಗಿ ಹಳೆಯ ಮುಸ್ತಫಾಬಾದ್‌ ನ ಬಾಬು ನಗರದಲ್ಲಿರುವ ಶಿವ ದೇವಾಲಯವನ್ನು ದಾಳಿಕೋರರಿಂದ ರಕ್ಷಿಸಿದ್ದಾರೆ.

ಇದೇ ಪ್ರದೇಶದಲ್ಲಿ ಮಸೀದಿಯೊಂದಕ್ಕೆ ಗಲಭೆಕೋರರು ಬೆಂಕಿ ಹಚ್ಚಿದ್ದರು.

"ಗಲಭೆಕೋರರ ಗುಂಪು ಈ ಕಡೆ ಬಂದರೆ ನಿಭಾಯಿಸಲು ಇಲ್ಲಿದ್ದವರೇ ಸಾಕು. ನಮ್ಮ ಪ್ರದೇಶದಲ್ಲಿ ಭ್ರಾತೃತ್ವ ಹಾಗೂ ಸೌಹಾರ್ದ ಇದೆ. ಅದನ್ನು ನಾಶ ಮಾಡಲು ನಾವು ಎಂದೂ ಅವಕಾಶ ನೀಡಲಾರೆವು" ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ದೇಶಬಂಧು ಕಾಲೇಜಿನ ಬಿ.ಎ. ವಿದ್ಯಾರ್ಥಿ ಮುಹಮ್ಮದ್ ಹಸೀನ್ (24) ಹೇಳುತ್ತಾರೆ.

ಶಿವದೇವಾಲಯವನ್ನು ದಾಳಿಕೋರರಿಂದ ರಕ್ಷಿಸಲು 24 ಗಂಟೆಗಳ ಕಾಲ ಕಣ್ಣಿರಿಸಿದ ಹಿಂದೂ-ಮುಸ್ಲಿಮರ ತಂಡದಲ್ಲಿ ಚಹಾದ ಅಂಗಡಿಗಳಿಗೆ ಸ್ನಾಕ್ಸ್‌  ಪೂರೈಸುವ ಕಮರುದ್ದೀನ್ (52) ಕೂಡ ಸೇರಿದ್ದಾರೆ. ‘‘ನಾವು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಇಲ್ಲಿ ಅಂತಹ ಗಲಭೆ ಎಂದಿಗೂ ನಡೆಯದು ಎಂಬುದು ನಮ್ಮ ನಿರೀಕ್ಷೆ. ಮಾನವತೆ ಕಾಪಾಡುವುದು ಇಂದು ಅತಿ ಮುಖ್ಯ’’ ಎಂದು ಅವರು ಹೇಳಿದ್ದಾರೆ.

"ಸಮೀಪದ ಪ್ರದೇಶಗಳಲ್ಲಿ ಹಿಂಸಾಚಾರ ಆರಂಭವಾದರೂ ನಮ್ಮ ಬೀದಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಎರಡೂ ಸಮುದಾಯಗಳು ಸಣ್ಣ ಸಣ್ಣ ತಂಡವಾಗಿ ಕೈಯಲ್ಲಿ ಲಾಠಿ ಹಿಡಿದುಕೊಂಡೆವು. ಗಲಭೆ ಉಂಟು ಮಾಡಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ನಿರ್ಧರಿಸಿದೆವು" ಎಂದು ಹಸನ್ ಎಂಬವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News