ಬಿಜೆಪಿ ದೇಣಿಗೆಯಲ್ಲಿ 70% ಹೆಚ್ಚಳ: 2018-19ರಲ್ಲಿ 742.15 ಕೋ.ರೂ. ಸಂಗ್ರಹ!

Update: 2020-02-28 16:31 GMT

ಹೊಸದಿಲ್ಲಿ, ಫೆ.28: ಕಳೆದ ಆರ್ಥಿಕ ವರ್ಷ(2018-19)ದಲ್ಲಿ ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ 70% ಹೆಚ್ಚಳವಾಗಿದ್ದು 742.15 ಕೋಟಿ ರೂ. ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ 148 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಎಡಿಆರ್ ವರದಿ ತಿಳಿಸಿದೆ.

2017-18ರಲ್ಲಿ ಬಿಜೆಪಿ 437.04 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದರೆ 2018-19ರಲ್ಲಿ ಇದು 742.15 ಕೋಟಿ ರೂ.ಗೆ ಹೆಚ್ಚಿದೆ. 2018-19ರಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 951.66 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದು ಇದರಲ್ಲಿ ಬಿಜೆಪಿಯ ಪಾಲು 78% ಆಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ.

 2017-18ರಲ್ಲಿ ಕಾಂಗ್ರೆಸ್ 26 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದರೆ,  2018-19ರಲ್ಲಿ ಇದು 148 ಕೋಟಿ ರೂ.ಗೆ ಹೆಚ್ಚಿದೆ. ಆದರೆ 2016-17ರಿಂದ 2017-18ರ ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಸಂಗ್ರಹಿಸಿದ್ದ ದೇಣಿಗೆಯಲ್ಲಿ 36% ಕುಸಿತವಾಗಿತ್ತು .

2018-19ರಲ್ಲಿ ಬಿಜೆಪಿ ಘೋಷಿಸಿರುವ ದೇಣಿಗೆಯ ಮೊತ್ತ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ಟಿಎಂಸಿ ಪಕ್ಷಗಳು ಪಡೆದಿರುವ ಒಟ್ಟು ದೇಣಿಗೆಗಿಂತ 3 ಪಟ್ಟು ಅಧಿಕವಾಗಿದೆ. ಬಿಜೆಪಿಗೆ ಕಾರ್ಪೊರೇಟ್/ ಉದ್ಯಮ ವಲಯದಿಂದ 1,575 ದೇಣಿಗೆ 2,741 ವೈಯಕ್ತಿಕ ದೇಣಿಗೆ ಸಂದಾಯವಾಗಿದೆ. ಕಾಂಗ್ರೆಸ್‌ಗೆ ಕಾರ್ಪೊರೇಟ್/ಉದ್ಯಮ ವಲಯದಿಂದ 122 ದೇಣಿಗೆ, 482 ವೈಯಕ್ತಿಕ ದೇಣಿಗೆ ಸಂದಾಯವಾಗಿದೆ.

2018-19ರಲ್ಲಿ ತಾನು 20,000 ರೂ. ಮೊತ್ತಕ್ಕಿಂತ ಹೆಚ್ಚಿನ ಯಾವುದೇ ದೇಣಿಗೆ ಪಡೆದಿಲ್ಲ ಎಂದು ಬಹುಜನ ಸಮಾಜ ಪಕ್ಷ ಹೇಳಿದೆ. ಪ್ರೋಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ಸೇರಿ ಒಟ್ಟು 455.15 ಕೋಟಿ ದೇಣಿಗೆ ಸಂದಾಯವಾಗಿದೆ. ಇದರಲ್ಲಿ ಬಿಜೆಪಿಗೆ 356.535 ಕೋಟಿ, ಕಾಂಗ್ರೆಸ್‌ಗೆ 55.629 ಕೋಟಿ ರೂ. ಸಂದಾಯವಾಗಿದೆ. ಪ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಬಿಜೆಪಿಗೆ 67.25 ಕೋಟಿ, ಕಾಂಗ್ರೆಸ್‌ಗೆ 39 ಕೋಟಿ ರೂ. ಸಂದಾಯವಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಆಧಾರದಲ್ಲಿ ಈ ಅಂಕಿಅಂಶ ಬಿಡುಗಡೆಗೊಳಿಸಿರುವುದಾಗಿ ಎಡಿಆರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News