ಅಮಾಯಕ ಜೀವಗಳ ರಕ್ಷಿಸಲು ಶಸ್ತ್ರಸಜ್ಜಿತ ಗುಂಪನ್ನು ಎದುರಿಸಿದ ಪೊಲೀಸ್ ಅಧಿಕಾರಿ

Update: 2020-02-28 17:14 GMT
photo: twitter.com/aspaligarh

ಹೊಸದಿಲ್ಲಿ,ಫೆ.28: ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಕಾರವಲ್ ನಗರದಲ್ಲಿ ಅಮಾಯಕ ಕುಟುಂಬಗಳ ರಕ್ಷಣೆಗಾಗಿ ಜೀವದ ಹಂಗು ತೊರೆದು ಶಸ್ತ್ರಸಜ್ಜಿತ ಗುಂಪನ್ನು ಎದುರಿಸಿದ ಹಿರಿಯ ಪೊಲೀಸ್ ಅಧಿಕಾರಿ ನೀರಜ್ ಜಾದೌನ್ ಅವರು ಜನರ ಕಣ್ಣುಗಳಲ್ಲಿ ‘ಹೀರೋ ’ಆಗಿದ್ದಾರೆ. ಆದರೆ ಈ ಹೆಗ್ಗಳಿಕೆಯನ್ನು ಒಪ್ಪದ ನೀರಜ್,ತಾನು ತನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ ಎಂದು ನಮ್ರವಾಗಿ ಹೇಳಿದ್ದಾರೆ.

ದಿಲ್ಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿಯಾಗಿರುವ ನೀರಜ್ ಫೆ.25ರಂದು ಗಡಿ ತನಿಖಾ ಠಾಣೆಯ ಗಸ್ತು ಕರ್ತವ್ಯದಲ್ಲಿದ್ದಾಗ ಅಲ್ಲಿಂದ ಕೇವಲ 200 ಮೀ.ದೂರದ ದಿಲ್ಲಿಯ ಕಾರವಲ್ ನಗರದಿಂದ ಗುಂಡಿನ ಶಬ್ದಗಳು ಕೇಳಿಬರುತ್ತಿದ್ದವು. ಸುಮಾರು 40-50ರಷ್ಟು ಜನರ ಗುಂಪೊಂದು ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದು, ಅವರಲ್ಲೋರ್ವ ಕೈಯಲ್ಲಿ ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಸಮೀಪದ ಮನೆಯೊಂದಕ್ಕೆ ನುಗ್ಗಿದ್ದ. ಇದನ್ನು ನೋಡಿದ ನೀರಜ್ ಸಾಂಪ್ರದಾಯಿಕ ಪೊಲೀಸ್ ಶಿಷ್ಟಾಚಾರವನ್ನು ಬದಿಗೊತ್ತಿ ರಾಜ್ಯದ ಗಡಿಯನ್ನು ದಾಟಿ ದಿಲ್ಲಿಯನ್ನು ಪ್ರವೇಶಿಸಲು ಕ್ಷಣಾರ್ಧದಲ್ಲಿ ನಿರ್ಧರಿಸಿದ್ದರು.

 “ಗಡಿ ದಾಟಲು ನಾನು ನಿರ್ಧರಿಸಿದ್ದೆ. ಅಪಾಯವನ್ನು ಅರಿತು ಮತ್ತು ಅದು ನನ್ನ ಅಧಿಕಾರ ವ್ಯಾಪ್ತಿಯ ಪ್ರದೇಶವಲ್ಲ ಎನ್ನುವುದು ಗೊತ್ತಿದ್ದೂ ಒಬ್ಬನೇ ತೆರಳಲು ಸಿದ್ಧನಾಗಿದ್ದೆ. ಆ 15 ಸೆಕೆಂಡ್‌ಗಳು ನನ್ನ ಬದುಕಿನ ಅತ್ಯಂತ ಭಯಂಕರ ಕ್ಷಣಗಳಾಗಿದ್ದವು. ಆದರೆ ನನ್ನೊಂದಿಗಿದ್ದ ತಂಡ ನನ್ನ ಜೊತೆಯಲ್ಲಿಯೇ ಬಂದಿತ್ತು ಮತ್ತು ನಾನು ನಂತರ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದಾಗ ಅವರೂ ನನ್ನನ್ನು ಬೆಂಬಲಿಸಿದರು” ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನೀರಜ್ ತಿಳಿಸಿದರು.

 ಪೊಲೀಸರ ಸಂಖ್ಯೆ ಕಡಿಮೆಯಿದ್ದು ಗುಂಪಿನಲ್ಲಿದ್ದವರ ಸಂಖ್ಯೆ ಹೆಚ್ಚಿತ್ತು ಮತ್ತು ಅವರು ಶಸ್ತ್ರಸಜ್ಜಿತರಾಗಿದ್ದರು. ಹೀಗಾಗಿ ನೀರಜ್ ನಿರ್ಧಾರ ಅತ್ಯಂತ ಅಪಾಯಕಾರಿಯಾಗಿತ್ತು. ಮಾತುಕತೆಯ ಮೂಲಕ ಗುಂಪಿನ ಮನವೊಲಿಸುವ ಪ್ರಯತ್ನ ವಿಫಲಗೊಂಡಾಗ ಪೊಲೀಸರು ಗುಂಡು ಹಾರಿಸುತ್ತಾರೆ ಎಂದು ನೀರಜ್ ಎಚ್ಚರಿಕೆ ನೀಡಿದ್ದರು. ಗುಂಪು ಚದುರಿತ್ತಾದರೂ ಕೆಲವೇ ಕ್ಷಣಗಳ ಬಳಿಕ ಅವರು ಪೊಲೀಸರತ್ತ ಕಲ್ಲುತೂರಾಟ ಆರಂಭಿಸಿದ್ದರು. ಗುಂಡಿನ ಶಬ್ದಗಳೂ ಕೇಳಿ ಬಂದಿದ್ದವು. ಆದರೆ ಇದರಿಂದ ಧೃತಿಗೆಡದ ನೀರಜ್ ಮತ್ತು ಅವರ ತಂಡ ಗುಂಪನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಈ ಸಂದರ್ಭ ಸ್ಥಳದಲ್ಲಿದ್ದ ಹಿಂದಿ ದೈನಿಕವೊಂದರ ವರದಿಗಾರ ರಿಷಿ ಕುಮಾರ್, ನೀರಜರ ನಿರ್ಧಾರ ತಾನು ಹಿಂದೆಂದೂ ನೋಡಿರದ ಅತ್ಯಂತ ಧೈರ್ಯದ ಕ್ರಮವಾಗಿತ್ತು ಎಂದು ಬಣ್ಣಿಸಿದರು. ಪರಿಸ್ಥಿತಿಯು ತುಂಬ ಅಪಾಯಕಾರಿಯಾಗಿತ್ತು. ದಂಗೆಕೋರರು ಶಸ್ತ್ರಸಜ್ಜಿತರಾಗಿದ್ದರು ಮತ್ತು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರು ರಕ್ತಕ್ಕಾಗಿ ಹಪಹಪಿಸುತ್ತಿದ್ದರು. ಅವರು ಪೊಲೀಸರಿಗೆ ಗುಂಡಿಕ್ಕುವ ಅಪಾಯವೂ ಇತ್ತು ಎಂದರು.

ದಂಗೆಕೋರರು ಬೆಂಕಿ ಹಚ್ಚಲು ಸನ್ನದ್ಧರಾಗಿ ಬಂದಿದ್ದರು. ಆ ಪ್ರದೇಶದಲ್ಲಿ ಬಾಂಬ್ ದಾಸ್ತಾನಿರಿಸಿದ್ದ ಹಲವಾರು ಮಳಿಗೆಗಳಿದ್ದವು. ಅಲ್ಲಿ ಬೆಂಕಿ ಹಚ್ಚಿದರೆ ಕ್ಷಣಾರ್ಧದಲ್ಲಿ ಇಡೀ ಪ್ರದೇಶವನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಅವಕಾಶ ನೀಡಿದ್ದರೆ ದಿಲ್ಲಿಯಲ್ಲಿ ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು ಎಂದು ನೀರಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News