ಭಾರತದ ಬ್ಯಾಟಿಂಗ್ ಗೆ ಕಿವೀಸ್ ಬೌಲಿಂಗ್ ಸವಾಲು: ನಾಳೆಯಿಂದ ಎರಡನೇ ಟೆಸ್ಟ್ ಆರಂಭ

Update: 2020-02-28 18:08 GMT

ಕ್ರೈಸ್ಟ್‌ಚರ್ಚ್ ಫೆ.28: ನ್ಯೂಝಿಲ್ಯಾಂಡ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಸ್ಟಾರ್ ಆಟಗಾರರನ್ನು ಒಳಗೊಂಡ ಬ್ಯಾಟಿಂಗ್ ವಿಭಾಗ ಮೊದಲ ಟೆಸ್ಟ್ ಪಂದ್ಯದಲ್ಲಿ ದಯನೀಯ ವೈಫಲ್ಯ ಅನುಭವಿಸಿ ಎರಡು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತ್ತು. ಶನಿವಾರ ಇಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಕಿವೀಸ್‌ನ ಶಾರ್ಟ್ ಬಾಲ್ ತಂತ್ರ ಬೆದರಿಕೆಯಾಗುವ ಸಾಧ್ಯತೆಯಿದೆ.

‘‘ಇಂತಹ ಆಘಾತಕಾರಿ ಸೋಲು ನಮ್ಮ ಮನಸ್ಸನ್ನು ಅಲುಗಾಡಿಸುತ್ತದೆ. ನಾವು ಸೋಲಿನ ರುಚಿ ಕಾಣದೇ ಇದ್ದರೆ ನಮ್ಮ ಮನಸ್ಥಿತಿ ಇದ್ದಹಾಗೆ ಇರುತ್ತದೆ’’ ಎಂದು ಭಾರತದ ಕೋಚ್ ರವಿ ಶಾಸ್ತ್ರಿ ಮೊದಲ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

 ಶಾರ್ಟ್ ಬಾಲ್ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ನೀಲ್ ವಾಗ್ನರ್ ಅವರು ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಹಾಗೂ ಕೈಲ್ ಜಮೀಸನ್ ಅವರನ್ನೊಳಗೊಂಡ ನ್ಯೂಝಿಲ್ಯಾಂಡ್ ಬೌಲಿಂಗ್ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ.

ಪೃಥ್ವಿ ಶಾ ಅವರು ಕೋಚ್ ರವಿ ಶಾಸ್ತ್ರಿ ಅವರ ಹದ್ದಿನ ಕಣ್ಣಿನಡಿ ನೆಟ್ ಪ್ರಾಕ್ಟೀಸ್‌ನಲ್ಲಿ ವ್ಯಸ್ತರಾಗಿದ್ದು, ನಾಯಕ ಕೊಹ್ಲಿ ಕೂಡ ಶಾಗೆ ಉಪಯುಕ್ತ ಸಲಹೆ ನೀಡುತ್ತಿದ್ದಾರೆ. ಶಾ ಮತ್ತೆ ನೆಟ್ ಪ್ರಾಕ್ಟೀಸ್ ಆರಂಭಿಸಿರುವುದು ಭಾರತಕ್ಕೆ ಸಿಹಿ ಸುದ್ದಿಯಾಗಿದೆ. ಅಜಿಂಕ್ಯ ರಹಾನೆ, ಹನುಮ ವಿಹಾರಿ ಹಾಗೂ ಚೇತೇಶ್ವರ ಪೂಜಾರ ಮೊದಲ ಟೆಸ್ಟ್ ಪಂದ್ಯದ ತಪ್ಪನ್ನು ತಿದ್ದುಕೊಂಡು ನಾಯಕ ಕೊಹ್ಲಿ ಮೇಲಿನ ಒತ್ತಡವನ್ನು ತಗ್ಗಿಸಬೇಕಾಗಿದೆ.

 ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿನ ಆಡುವ 11ರ ಬಳಗದಲ್ಲಿ ಕೇವಲ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜ ಆಡುವ ಸಾಧ್ಯತೆಯಿದೆ. ಜಡೇಜ ಹಾಗೂ ಅಶ್ವಿನ್ ಮಧ್ಯೆ ಯಾರು ಆಡಲಿದ್ದಾರೆಂದು ಶನಿವಾರ ನಿರ್ಧರಿಸಲಾಗುವುದು ಎಂದಿರುವ ಕೋಚ್ ಶಾಸ್ತ್ರಿ ಅವರು ಸೌರಾಷ್ಟ್ರ ಆಲ್‌ರೌಂಡರ್ ಜಡೇಜರ ಮೇಲೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ನ್ಯೂಝಿಲ್ಯಾಂಡ್ ತಂಡಕ್ಕೆ ವಾಗ್ನರ್ ವಾಪಸಾಗಿರುವ ಹಿನ್ನೆಲೆಯಲ್ಲಿ ತಂಡದಿಂದ ಯಾರನ್ನು ಕೈಬಿಡಬೇಕೆಂಬ ಪ್ರಶ್ನೆ ಎದುರಾಗಿದೆ. ಚೊಚ್ಚಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿರುವ ಕೈಲ್ ಜಮೀಸನ್ ಅವರು ವಾಗ್ನರ್‌ಗೆ ತಮ್ಮ ಸ್ಥಾನ ಬಿಟ್ಟುಕೊಡುತ್ತಾರೋ ಎಂಬ ಕುತೂಹಲ ಎಲ್ಲರಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News