ಗುಜರಾತ್ ಅಭಿವೃದ್ಧಿ ಮಾದರಿಯ ಸುತ್ತ ಯಾಕಾಗಿ ಗೋಡೆಗಳು?

Update: 2020-02-29 03:46 GMT

ಬಡವರು ವಾಸಿಸುವ ಪ್ರದೇಶಗಳ ಸುತ್ತ ಗೋಡೆಗಳನ್ನು ನಿರ್ಮಿಸುವುದರಿಂದ ಅಂತರ್‌ರಾಷ್ಟ್ರೀಯವಾಗಿ ನಮ್ಮ ಪ್ರತಿಷ್ಠೆ ಹೆಚ್ಚುವುದಿಲ್ಲ. ಇದು (ಗೋಡೆ ಕಟ್ಟುವುದು) ನಮ್ಮ ದೌರ್ಬಲ್ಯವನ್ನು ಬಯಲುಗೊಳಿಸುತ್ತದೆಯೇ ಹೊರತು ನಮ್ಮ ಶಕ್ತಿಯನ್ನಲ್ಲ. ಒಂದೆಡೆ ಪ್ರಧಾನಿಯವರು ಭಾರತದ ಹಿಂದಿನ ಮೂರು ಟ್ರಿಲಿಯನ್ ಅರ್ಥ ವ್ಯವಸ್ಥೆಯನ್ನು ಐದು ಟ್ರಿಲಿಯನ್ ಅರ್ಥವ್ಯವಸ್ಥೆಯಾಗಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ದೇಶದ ಬಡತನವನ್ನು ಮುಚ್ಚಿಡಲು ಗೋಡೆಗಳನ್ನು ನಿರ್ಮಿಸುತ್ತಾರೆ.

ಡೊನಾಲ್ಡ್ ಟ್ರಂಪ್ ‘ನಮಸ್ತೆ ಟ್ರಂಪ್’ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಹೈದರಾಬಾದ್‌ಗೋ, ವಿಶಾಖಪಟ್ಟಣಕ್ಕೋ, ಬೆಂಗಳೂರಿ ಅಥವಾ ಚೆನ್ನೈಗೋ ಬರುತ್ತಾರೆಂದು ಇಟ್ಟುಕೊಳ್ಳುವ. ಆಗ ವಿಮಾನ ನಿಲ್ದಾಣದ ಹಾದಿಗೆ ಅಥವಾ ಅವರ ಹೊಟೇಲಿಗೆ ಅಥವಾ ಕ್ರಿಕೆಟ್ ಸ್ಟೇಡಿಯಂಗೆ ಹೋಗುವ ಮಾರ್ಗದ ಅಕ್ಕಪಕ್ಕದಲ್ಲಿ ಗೋಡೆಗಳನ್ನು ನಿರ್ಮಿಸುವ ಅಗತ್ಯವಿರುತ್ತಿರಲಿಲ್ಲ. ಆದರೆ ಅಹ್ಮದಾಬಾದ್‌ನಲ್ಲಿ ಇಂತಹ ಗೋಡೆ ನಿರ್ಮಾಣದ ಅಗತ್ಯವಿದೆ. ಯಾಕೆಂದರೆ ಅಲ್ಲಿ ಯಾವುದೇ ದೊಡ್ಡ ಹೊಟೇಲ್ ಅಥವಾ ಕ್ರೀಡಾಂಗಣಕ್ಕೆ ಹೋಗುವ ಹಾದಿಯಲ್ಲಿ ಕೊಳೆಗೇರಿಗಳಿವೆ. ಅವು ಕಣ್ಣಿಗೆ ನೋಡಲು ಕೊಳಕಾಗಿ ಕಾಣುವುದಷ್ಟೇ ಅಲ್ಲ, ಕೆಟ್ಟ ವಾಸನೆಯಿಂದ ಕೂಡಿವೆ. ಆದ್ದರಿಂದ ‘ಗುಜರಾತ್ ಮಾದರಿ’ಯ ಬಡತನ ಮತ್ತು ಕೊಳೆಗೇರಿ ಬದುಕಿನ ಸುತ್ತ ಪ್ರಧಾನಿ ಗೋಡೆಗಳನ್ನು ಕಟ್ಟಲು ಬಯಸಿದ್ದರು. ‘ಸ್ಲಂಡಾಗ್ ಮಿಲಿಯನೇರ್’ ಹೇಳಿದ ಹಾಗೆ ಕೊಳಗೇರಿ ಜೀವನ ಗುಜರಾತ್ ಅಭಿವೃದ್ಧಿ ಮಾದರಿಯ ಕಥೆ ಹೇಳುತ್ತದೆ.

ಇದು ತುಂಬಾ ಮೂಲಭೂತವಾದ ಒಂದು ಪ್ರಶ್ನೆ ಅನಿಸುತ್ತದೆ. ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಹನ್ನೆರಡು ವರ್ಷಗಳ ಅವಧಿಯಲ್ಲಿ ಮತ್ತು ಬಳಿಕ ಅವರು ಆಯ್ಕೆ ಮಾಡಿದ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಗುಜರಾತ್ ಅಭಿವೃದ್ಧಿ ಮಾದರಿ ಯಾವ ರೀತಿಯದ್ದಾಗಿತ್ತು?. ಅಹ್ಮದಾಬಾದ್ ಯಾವ ರೀತಿಯಿಂದಲೂ ದಕ್ಷಿಣ ಭಾರತದ ರಾಜ್ಯಗಳ ರಾಜಧಾನಿ ನಗರಗಳಿಗೆ ಸಮಾನಾದ ನಗರವಲ್ಲ. ವಾಸ್ತವ ಹೀಗಿರುವಾಗ ರಾಷ್ಟ್ರೀಯ ಮಾಧ್ಯಮಗಳು ‘ಗುಜರಾತ್ ಮಾದರಿ’ ಎಂದು ಹೇಗೆ ಕಹಳೆೆ ಊದಿದವು? ಮತ್ತು ಆರೆಸ್ಸೆಸ್/ಬಿಜೆಪಿ 2014ರ ಮೊದಲು ಮತ್ತು 2014ರ ಚುನಾವಣೆಯ ವೇಳೆ ಈ ಮಾದರಿಯ ಬಗ್ಗೆ ಹೇಗೆ ಪ್ರಚಾರ ಮಾಡಿದವು ಮತ್ತು ದಕ್ಷಿಣ ಭಾರತದ ರಾಜ್ಯಗಳೂ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಜನರು ಈ ಪ್ರಚಾರವನ್ನು ನಂಬಿ ಆ ಮಾದರಿಗೆ ಮತ ನೀಡಿದರು? ಇದೆಲ್ಲ ತುಂಬಾ ಕುತೂಹಲಕಾರಿ ಪ್ರಶ್ನೆಗಳು. ಮಾಧ್ಯಮಗಳು ಎಂತಹ ಸುಳ್ಳನ್ನು ಸೃಷ್ಟಿಸುತ್ತವೆ ಎನ್ನುವುದನ್ನಷ್ಟೇ ಇದು ಹೇಳುತ್ತದೆ.

ಗುಜರಾತ್‌ನಲ್ಲಿ ಇತರ ರಾಜ್ಯಗಳಲ್ಲಿರುವಂತೆ ಹೆಚ್ಚು ಸಂಖ್ಯೆಯ ಉದ್ಯಮಗಳಿವೆ ಮತ್ತು ಅವುಗಳಲ್ಲಿ ಹಲವು, ಕಾಂಗ್ರೆಸ್ ಆಡಳಿತದಿಂದ ಅವುಗಳಿಗಾದ ಭ್ರಮನಿರಸನದಿಂದಾಗಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸಿದವು. 2014ರ ಚುನಾವಣೆಗಳಿಗೆ ಮೊದಲು ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತ್ತು. ಅಲ್ಲದೆ ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಕುಟುಂಬ ನಿಯಂತ್ರಣ ವಿಷಯಗಳಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆಗ ಗುಜರಾತ್‌ನ ಉದ್ಯಮಿಗಳು ಬಿಜೆಪಿ ಆಡಳಿತದಲ್ಲಿ ತಮ್ಮ ಅರ್ಥವ್ಯವಸ್ಥೆ ಅನಿಯಂತ್ರಿತವಾಗಿ ಬೆಳೆಯುವ ಒಂದು ಭವಿಷ್ಯದ ಕನಸು ಕಾಣುತ್ತಿದ್ದರು. ಈಗಿನ ಆಳುವ ಸರಕಾರದ ಬೆಂಬಲಿಗರೂ ಆಗಿರುವ ಕೆಲ ಉದ್ಯಮಿಗಳು ಅವರು ಕಲ್ಪಿಸಿಯೂ ಇರದಷ್ಟು ಹೆಚ್ಚು ಸಂಪತ್ತು ಗಳಿಸಿದರು. ಆದರೆ ಈಗ ಅರ್ಥ ವ್ಯವಸ್ಥೆ ತುಂಬಾ ಕೆಟ್ಟ ಸ್ಥಿತಿಯಲ್ಲಿದೆ ಮತ್ತು ಹಲವು ಉದ್ಯಮಗಳು ಗಂಭೀರ ಸ್ವರೂಪದ ಬಿಕ್ಕಟ್ಟಿನಲ್ಲಿವೆ. ಆದರೆ ಮೋದಿ ಸರಕಾರ ಮತ್ತು ದಿಲ್ಲಿಯಲ್ಲಿರುವ ಆಳುವ ಪಕ್ಷ ಟ್ರಂಪ್ ಅವರ ಕಣ್ಣಿಗೆ ಭಾರತದ ಬಡತನ ಕಾಣಬಾರದೆಂದು ಗೋಡೆಗಳನ್ನು ಕಟ್ಟುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಜಾಗತಿಕ ಮಾಧ್ಯಮಗಳ ಕಣ್ಣಿಗೆ ಕೂಡ ಕಾಣಿಸದಂತೆ ಆ ಗೋಡೆಗಳನ್ನು ಕಟ್ಟಲಾಗಿದೆ. ಭಾರತದಲ್ಲಿ ಕೂಡ ಮಾಧ್ಯಮಗಳಿಗೆ ಜ್ಞಾನೋದಯವಾಗುತ್ತಿದೆ ಎನ್ನುವುದು ಸತ್ಯ.

ದಕ್ಷಿಣ ಭಾರತದ ಕೆಲವು ರಾಜ್ಯಗಳು ಕೊಳೆಗೇರಿ ನಿವಾಸಿಗಳಿಗೆ ನೀಡಿದಂತೆ ಗುಜರಾತ್ ಸರಕಾರ ಮತ್ತು ಮೋದಿ ನೇತೃತ್ವದ ಕೇಂದ್ರ ಸರಕಾರ ಎರಡೂ ಕೂಡ ಅಹ್ಮದಾಬಾದ್‌ನ ಆ ಕೊಳೆಗೇರಿ ನಿವಾಸಿಗಳಿಗೆ ಎರಡು ಬೆಡ್‌ರೂಮ್‌ಗಳ ಮನೆಗಳನ್ನು ನೀಡಲು ಅಸಮರ್ಥವಾದವು. ದೇಶದ ಅಪಾರ ಸಂಪತ್ತನ್ನು ನಿಯಂತ್ರಿಸುತ್ತಿರುವ ಅಂಬಾನಿ ಮತ್ತು ಅದಾನಿಯಂತಹ ಶ್ರೀಮಂತ ಉದ್ಯಮಿಗಳ ಕೃಪೆ ಇರುವಾಗಲೂ ಭಾರತದ ಅತ್ಯಂತ ಹೆಚ್ಚು ಔದ್ಯಮಿಕ ಗೊಳಿಸಲಾದ ರಾಜ್ಯ ಗುಜರಾತ್ ತನ್ನ ರಾಜ್ಯದ ರಾಜಧಾನಿಯಲ್ಲಿ ಬಡತನ ನಿವಾರಿಸಲು ತೀರಾ ವಿಫಲವಾಯಿತು. ಅದೇನಿದ್ದರೂ ಈ ಉದ್ಯಮಿಗಳು ತಮ್ಮ ಸಂಪತ್ತನ್ನು ಭಾರತದ ಬಡವರ ಜೊತೆ ಹಂಚಿಕೊಳ್ಳುವುದಿಲ್ಲ. ಅವರ ಪಾಲಿಗೆ ಹೀಗೆ ಸಂಪತ್ತನ್ನು ಹಂಚಿಕೊಳ್ಳಬೇಕೆಂಬ ಅಂತಹ ಯಾವುದೇ ನೈತಿಕ ಬದ್ಧತೆ ಇಲ್ಲ.

2018ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ಭಾರತದ ರಾಜ್ಯಗಳಲ್ಲಿ 22ನೇ ರ್ಯಾಂಕ್ ಗಳಿಸಿತ್ತು. ಆದರೆ ಕೇವಲ ಆರು ವರ್ಷಗಳ ಹಿಂದೆ ಅಭಿವೃದ್ಧಿಗೆ ಒಂದು ಮಾದರಿ ಎಂದು ಬಿಂಬಿಸಲಾದ ರಾಜ್ಯದ ಸಂಪತ್ತು ಅಲ್ಲಿಯ ಶ್ರೀಮಂತರ ಕೈಯಲ್ಲಿ ಭಾರೀ ಪ್ರಮಾಣದಲ್ಲಿ ಶೇಖರವಾಯಿತು. ಈ ರಹಸ್ಯ ಈಗ ಬಯಲಾಗುತ್ತಿದೆ.

 ಆದ್ದರಿಂದ ಗುಜರಾತನ್ನು ಒಂದು ಷೋಕೇಸ್ ಆಗಿ ತೋರಿಸಲು ಅನುವು ಮಾಡಿಕೊಟ್ಟ ಆರೆಸ್ಸೆಸ್/ಬಿಜೆಪಿಗೆ ಈಗ ರಾಷ್ಟ್ರ ಅಭಿವೃದ್ಧಿಯ ಮಾದರಿಯಲ್ಲಿ ನಂಬಿಕೆ ಕಳೆದುಕೊಂಡಿದೆ ಎನ್ನುವುದು ಮನವರಿಕೆಯಾದಂತೆ ಕಾಣಿಸುತ್ತದೆ. ಆದ್ದರಿಂದ ಈಗ ಸಿಎಎ, ಎನ್‌ಆರ್‌ಸಿ ಕೋಮುವಾದಿ ಕಾರ್ಡನ್ನು ಮುಂದು ಮಾಡಲಾಗಿದೆ. ಭಾರತದ ಮುಸ್ಲಿಮರು ದೇಶ ರಹಿತರಾಗಿ ಉಳಿಯಬಹುದೆಂದು ಸ್ವತಃ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಅವರೇ ಹೇಳಿರುವುದರಿಂದ ಈ ಕಮ್ಯೂನಲ್ ಕಾರ್ಡ್ ನಮ್ಮ ದೇಶಕ್ಕಿಂತ ಹೆಚ್ಚಾಗಿ ವಿದೇಶಿ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ. ಇದು ವಿಶ್ವಸಂಸ್ಥೆ ಮಾಡಿರುವ ಗಂಭೀರ ಸ್ವರೂಪದ ಟೀಕೆ. ವಿಶ್ವ ರಾಷ್ಟ್ರಗಳ ನಡುವೆ ಭಾರತದ ಇಂತಹ ಚಿತ್ರದ ಬಗ್ಗೆ ಸಮಗ್ರ ದೇಶ ಆತಂಕ ಪಡಬೇಕಾಗಿದೆ. ಈಗ ಜಗತ್ತು ಸಿಎಎ, ಎನ್‌ಆರ್‌ಸಿ ಅಂತರ ಕಾರ್ಯಸೂಚಿ (ಅಜೆಂಡಾ)ಗಳನ್ನು ತಿರಸ್ಕರಿಸುತ್ತಿದೆ. ಯಾಕೆಂದರೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ಅತ್ಯಂತ ಹಳೆಯ ಪ್ರಜಾಪ್ರಭುತ್ವ ತಮ್ಮ ಕೈಗಳಲ್ಲಿ ಧಾರ್ಮಿಕ ಹಾಗೂ ಕೋಮುವಾದಿ ಕಾರ್ಡುಗಳನ್ನು ಹಿಡಿದುಕೊಂಡು ಸಾಗುವುದು ಸಾಧ್ಯವಿಲ್ಲವಾಗಿದೆ. ಭಾರತವು ಮತೀಯವಾದದೊಳಕ್ಕೆ ಜಾರುತ್ತಿದ್ದಂತೆಯೇ ಅಮೆರಿಕ ಟ್ರಂಪ್ ಆಡಳಿತದ ಅಡಿಯಲ್ಲಿ ತನ್ನ ಪ್ರಜಾಪ್ರಭುತ್ವವನ್ನು ಜಾತ್ಯತೀತ ಪರಿಕಲ್ಪನೆಗಳ ಗಡಿಗಳಿಂದ ಹೊರಗೆ ತಳ್ಳುತ್ತಿದೆ. ಟ್ರಂಪ್ ಮತ್ತು ಮೋದಿ ‘ಅಮೆರಿಕ ಮೊದಲು’ (ಅಮೆರಿಕ ಫಸ್ಟ್) ಹಾಗೂ ‘ಭಾರತ ಮೊದಲು’ (ಇಂಡಿಯಾ ಫಸ್ಟ್) ಘೋಷಣೆಗಳ ಬಲದಿಂದ ಚುನಾವಣೆಗಳಲ್ಲಿ ಗೆದ್ದರಾದರೂ ಅಮೆರಿಕ ಟ್ರಂಪ್ ನೇತೃತ್ವದ ಆಡಳಿತದಲ್ಲಿ ರಾಷ್ಟ್ರದ ನಿರುದ್ಯೋಗ ನಕ್ಷೆಯನ್ನು ಬದಲಿಸುವಲ್ಲಿ ಯಶಸ್ವಿಯಾಯಿತು. ಅಮೆರಿಕದ ನಿರುದ್ಯೋಗ ದರ ಕಳೆದ 50 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಮತ್ತು ಮೋದಿ ಆಡಳಿತದಲ್ಲಿ ಭಾರತದ ನಿರುದ್ಯೋಗ ದರ ಕಳೆದ 40 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

ಟ್ರಂಪ್ ಅಮೆರಿಕದ ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸುವುದಾಗಿ ಆಶ್ವಾಸನೆ ನೀಡಿದರಾದರೂ ಡೆಮಾಕ್ರಟರ ಪ್ರಬಲ ವಿರೋಧದಿಂದಾಗಿ ಅವರಿಗೆ ಗೋಡೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಟ್ರಂಪ್ ಅವರಿಗೆ ಎಷ್ಟೊಂದು ತೀವ್ರವಾದ ವಿರೋಧವಿತ್ತೆಂದರೆ ಅವರನ್ನು ಕಾಂಗ್ರೆಸ್‌ನಲ್ಲಿ ಮಹಾ ವಿಚಾರಣೆಗೆ (ಇಂಪೀಚ್‌ಮೆಂಟ್) ಗುರಿ ಮಾಡಲಾಯಿತು. ಆದರೆ ಕೇವಲ ಆರು ಮತಗಳ ಅಂತರದಲ್ಲಿ ಅವರು ಸೆನೆಟ್‌ನಲ್ಲಿ ಅಧಿಕಾರ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಂಡರು.

ಆದರೆ ಮೋದಿಯವರು ರಾಷ್ಟ್ರದಲ್ಲಿ ನಾರುತ್ತಿರುವ ಬಡತನವನ್ನು ಮುಚ್ಚಿಡಲು ಕೊಳೆಗೇರಿಗಳ ಸುತ್ತ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೂ ಕೂಡ ಅವರಿಗೆ ಪ್ರಬಲವಾದ ವಿರೋಧ ವ್ಯಕ್ತವಾಗಿಲ್ಲ. ಮೋದಿ ಸರಕಾರದ ಅಥವಾ ಅವರ ಪಕ್ಷದ ಯಾವನೇ ಟೀಕಾಕಾರರನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಈ ರಾಷ್ಟ್ರೀಯತೆ ಏನನ್ನು ಸೂಚಿಸುತ್ತದೆ?

ಅಷ್ಟೊಂದು ರಾಷ್ಟ್ರೀಯವಾದದ ಪ್ರಭಾವಲಯದ ನಡುವೆ ಯಾಕಾಗಿ ಜನರ ಅಂತಹ ಕೊಳೆಗೇರಿ ಬದುಕು ಬದಲಾಗದೆ ಇದ್ದ ಸ್ಥಿತಿಯಲ್ಲೇ ಇರುತ್ತದೆ? ಬಿಜೆಪಿ ಗರಿಷ್ಠ ಸ್ಥಾನಗಳನ್ನು ಪಡೆದ ಉತ್ತರ ಭಾರತದ ಉದ್ದಗಲಕ್ಕೂ ಪ್ರಯಾಣಿಸುವ ಯಾರಿಗೇ ಆದರೂ ಅಲ್ಲಿ ಎಲ್ಲೆಲ್ಲೂ ಬಡತನ ಮತ್ತು ಜನರ ಗೋಳು ಕಣ್ಣಿಗೆ ರಾಚುತ್ತದೆ. ಬಿಜೆಪಿ ಹೆಚ್ಚು ಮುನ್ನಡೆ ಸಾಧಿಸಲು ಆಗದಿದ್ದ ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಹೀಗಿಲ್ಲ. ದಕ್ಷಿಣ ಭಾರತದಲ್ಲಿ ಪ್ರಯಾಣಿಸುವ ಯಾರೇ ಆದರೂ ಅಲ್ಲಿ ಉತ್ತರ ಭಾರತಕ್ಕಿಂತ ಉತ್ತಮವಾದ ಜೀವನ ಪರಿಸ್ಥಿತಿಯನ್ನು, ಆರೋಗ್ಯ ಮಟ್ಟಗಳನ್ನು, ವಸತಿ ಸವಲತ್ತುಗಳನ್ನೂ ಕಾಣಬಹುದು. ಅಲ್ಲದೇ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಲ್ಲಿರುವುದಕ್ಕಿಂತ ಹೆಚ್ಚಿನ ಸಾಮಾಜಿಕ ವಿವಿಧತೆ ಕಾಣಿಸುತ್ತದೆ.

ರಾಷ್ಟ್ರೀಯ ನೈತಿಕತೆ ಎಂದರೇನು? ಒಂದು ರಾಷ್ಟ್ರೀಯವಾದಿ ಪಕ್ಷದ ಹಾಗೂ ನಾಯಕನ ಮೂಲ ಗುರಿ ಅಸಮಾನತೆಗಳನ್ನು ಹಾಗೂ ಶೋಷಣೆಯನ್ನು ಕಡಿಮೆ ಮಾಡುವುದು ಆಗಿರಬೇಕು. ಉತ್ಪಾದಕತೆಯನ್ನು ಹೆಚ್ಚಿಸುವ ಜನಸಾಮಾನ್ಯರ ಬದುಕನ್ನು ಸುಧಾರಿಸುವ, ಉತ್ತಮ ಪಡಿಸುವ ಮೂಲಭೂತ ವಿಷಯಕ್ಕೆ ಯಾಕೆ ಮಹತ್ವವಿಲ್ಲ? ಯಾಕಾಗಿ ಈ ವಿಷಯದ ಮೇಲೆ ಸರಕಾರದ ಗಮನ ಕೇಂದ್ರೀಕೃತವಾಗಿಲ್ಲ?

ಬಡವರು ವಾಸಿಸುವ ಪ್ರದೇಶಗಳ ಸುತ್ತ ಗೋಡೆಗಳನ್ನು ನಿರ್ಮಿಸುವುದರಿಂದ ಅಂತರ್‌ರಾಷ್ಟ್ರೀಯವಾಗಿ ನಮ್ಮ ಪ್ರತಿಷ್ಠೆ ಹೆಚ್ಚುವುದಿಲ್ಲ. ಇದು (ಗೋಡೆ ಕಟ್ಟುವುದು) ನಮ್ಮ ದೌರ್ಬಲ್ಯವನ್ನು ಬಯಲುಗೊಳಿಸುತ್ತದೆಯೇ ಹೊರತು ನಮ್ಮ ಶಕ್ತಿಯನ್ನಲ್ಲ. ಒಂದೆಡೆ ಪ್ರಧಾನಿಯವರು ಭಾರತದ ಹಿಂದಿನ ಮೂರು ಟ್ರಿಲಿಯನ್ ಅರ್ಥ ವ್ಯವಸ್ಥೆಯನ್ನು ಐದು ಟ್ರಿಲಿಯನ್ ಅರ್ಥವ್ಯವಸ್ಥೆಯಾಗಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ದೇಶದ ಬಡತನವನ್ನು ಮುಚ್ಚಿಡಲು ಗೋಡೆಗಳನ್ನು ನಿರ್ಮಿಸುತ್ತಾರೆ. ಪೌರಾಣಿಕ ಮೂಲಗಳಿಂದ ಸಂಪತ್ತನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ದೇಶದ ಜನಸಮುದಾಯ ದುಡಿದು ಸಂಪತ್ತನ್ನು ಉತ್ಪಾದಿಸಬೇಕು. ಸಂಪತ್ತಿನ ಮುಖ್ಯ ಸಂಪನ್ಮೂಲವೆಂದರೆ ಜನಕೋಟಿಯ ದುಡಿಮೆ. ಅವರ ಆಹಾರಕ್ರಮ, ಮನೆ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ಒಳಗೊಂಡಿರುವ ಅವರ ಬದುಕಿನ ಸ್ಥಿತಿಗಳು ಉತ್ತಮವಾಗಿರಬೇಕು. ಅವರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿ ಈಗಿನ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಕಾಣಿಸುತ್ತಿಲ್ಲ. ಬಡ ಕೊಳೆಗೇರಿ ನಿವಾಸಿಗಳ ಹಾಗೂ ಗ್ರಾಮೀಣ ಜನರ ಜೀವನ ಸ್ಥಿತಿಗಳನ್ನು ಬದಲಿಸುವ ವಿಷಯಗಳನ್ನು ಬಿಟ್ಟು ಇತರ ವಿಷಯಗಳ ಮೇಲೆ ಈ ಸರಕಾರದ ಗಮನ ಕೇಂದ್ರೀಕೃತವಾಗಿದೆ.

ಟ್ರಂಪ್ ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಗುಜರಾತ್‌ನ ದುಡಿಯುವ ಜನರ ತೀವ್ರವಾದ ಬಡತನವನ್ನು ಮುಚ್ಚಿಡಲು ಕಟ್ಟಲಾಗಿರುವ ಗೋಡೆಗಳು, ಗುಜರಾತ್ ಮತ್ತು ದಿಲ್ಲಿ ಎರಡೂ ಕಡೆಗಳಲ್ಲಿ ಮೋದಿ ಸರಕಾರದ ಕತೆ ಹೇಳಲು ಮುಂದೆ ಬರುವ ಬಹಳ ಕಾಲದವರೆಗೆ ಉಳಿಯುತ್ತವೆ.

(ಕಾಂಚ ಐಲಯ್ಯ ಓರ್ವ ರಾಜಕೀಯ ಸಿದ್ಧಾಂತಿ, ಸಾಮಾಜಿಕ ಕಾರ್ಯಕರ್ತ ಮತ್ತು ಹಲವು ಪುಸ್ತಕಗಳ ಲೇಖಕರು. From a Shepherd Boy to an Intellectual: My Memoirs ಅವರ ಇತ್ತೀಚಿನ ಪುಸ್ತಕ)

Writer - ಕಾಂಚ ಐಲಯ್ಯ ಶೆಫರ್ಡ್

contributor

Editor - ಕಾಂಚ ಐಲಯ್ಯ ಶೆಫರ್ಡ್

contributor

Similar News