ವರ್ಗಾವಣೆ ಆದೇಶ ಹೊರಡಿಸುವ ವಿಚಾರದಲ್ಲಿ ಕೇಂದ್ರ 'ಎಚ್ಚರಿಕೆ' ವಹಿಸಬೇಕಿತ್ತು: ಮಾಜಿ ಸಿಜೆಐ ಬಾಲಕೃಷ್ಣನ್

Update: 2020-02-29 09:25 GMT

ಹೊಸದಿಲ್ಲಿ: ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾವಣೆಗೊಳಿಸಿ ಮಧ್ಯರಾತ್ರಿ ಆದೇಶ ಹೊರಡಿಸುವಾಗ ಕೇಂದ್ರ ಸರಕಾರ 'ಸ್ವಲ್ಪ ಎಚ್ಚರಿಕೆ' ವಹಿಸಬೇಕಿತ್ತು ಎಂದು ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ದಿಲ್ಲಿ ಹಿಂಸಾಚಾರ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದ ಹಾಗೂ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ದಿಲ್ಲಿ ಪೊಲೀಸರು ಹಾಗೂ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಜಸ್ಟಿಸ್ ಮುರಳೀಧರ್ ಅವರನ್ನು ಮಧ್ಯರಾತ್ರಿ ವರ್ಗಾವಣೆಗೊಳಿಸಿ ಹೊರಡಿಸಿದ ಆದೇಶ ಭಾರೀ ವಿವಾದಕ್ಕೀಡಾಗಿರುವಂತೆಯೇ ಮಾಜಿ ಸಿಜೆಐ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

"ದಿಲ್ಲಿ ಪ್ರಕರಣದ ವಿಚಾರಣೆಯನ್ನು ಅವರು ಕೈಗೆತ್ತಿಕೊಂಡ ದಿನದಂದೇ ವರ್ಗಾವಣೆ ಆದೇಶ ಬಂದಿರುವುದು ಕೇವಲ ಕಾಕತಾಳೀಯ. ಸುಪ್ರೀಂ ಕೋರ್ಟ್ ಕೊಲೀಜಿಯಂ ಅವರ ವರ್ಗಾವಣೆಗೆ ಒಂದು ವಾರದ ಹಿಂದೆಯೇ ಶಿಫಾರಸು ಮಾಡಿತ್ತು'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಜಸ್ಟಿಸ್ ಬಾಲಕೃಷ್ಣನ್ ಹೇಳಿದರು.

``ಅವರ ವರ್ಗಾವಣೆಗೂ ದಿಲ್ಲಿ ಹಿಂಸಾಚಾರ ಕುರಿತ ಪ್ರಕರಣದ ವಿಚಾರಣೆಗೂ ಸಂಬಂಧವಿಲ್ಲ'' ಎಂದು ಹೇಳಿದ  ಅವರು , ಜನರು ಬೇರೆಯೇ ಅರ್ಥ ಕಲ್ಪಿಸುವ ಸಾಧ್ಯತೆಯಿದ್ದುದರಿಂದ ಇಂತಹ ಒಂದು ಆದೇಶವನ್ನು ಇಂತಹ ಒಂದು ಸಮಯದಲ್ಲಿ ನೀಡುವ ಮುಂಚೆ ಸರಕಾರ ಸ್ವಲ್ಪ ಎಚ್ಚರಿಕೆಯಿಂದಿರಬೇಕಿತ್ತು ಎಂದು ಹೇಳಿದರು.

ಮರುದಿನವೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಲ್ಲಿ ಹಾಜರಾಗುವಂತೆ ಅವರಿಗೆ ಹೇಳಿರಲು ಸಾಧ್ಯವಿಲ್ಲ. ಇಂತಹ ಆದೇಶ ನೀಡುವಾಗ ಕನಿಷ್ಠ ಏಳು ದಿನಗಳ ಸಮಯಾವಕಾಶ ನೀಡಲಾಗುತ್ತದೆ ಎಂದು ಜಸ್ಟಿಸ್ ಬಾಲಕೃಷ್ಣನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News