ದಿಲ್ಲಿ ಹಿಂಸಾಚಾರ: ದ್ವಿಚಕ್ರ ವಾಹನದಲ್ಲಿ 80 ಮುಸ್ಲಿಮರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಮೊಹೀಂದರ್ ಸಿಂಗ್

Update: 2020-02-29 10:12 GMT
Photo: huffingtonpost.in

ಹೊಸದಿಲ್ಲಿ: ಫೆಬ್ರವರಿ 24ರಂದು ಈಶಾನ್ಯ ದಿಲ್ಲಿಯ ಗೋಕಲ್‍ ಪುರಿಯಲ್ಲಿ ಭೀಕರ ಹಿಂಸಾಚಾರಕ್ಕೆ ಜನರು ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬುಲೆಟ್ ಮೋಟಾರ್ ಸೈಕಲ್ ಹಾಗೂ ಸ್ಕೂಟಿಯಲ್ಲಿ ಸುಮಾರು 60ರಿಂದ 80 ಮಂದಿ ನೆರೆಹೊರೆಯ ಮುಸ್ಲಿಮರನ್ನು ಸುರಕ್ಷಿತ ತಾಣಕ್ಕೆ ಕಳುಹಿಸಿ ಮಾನವೀಯತೆ ಮೆರೆದವರು ಮೊಹೀಂದರ್ ಸಿಂಗ್ ಹಾಗೂ ಅವರ ಪುತ್ರ ಇಂದರ್‍ ಜಿತ್ ಸಿಂಗ್.

ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಲಿದೆ ಎಂದು ಅರಿತ ಅಪ್ಪ-ಮಗ ತಮ್ಮ ನೆರೆಯ ಮುಸ್ಲಿಮರನ್ನು ಹತ್ತಿರದ ಕರ್ದಂಪುರಿ ಪ್ರದೇಶಕ್ಕೆ ಕರೆದೊಯ್ದಿದ್ದರು.

ಐವತ್ಮೂರು ವರ್ಷದ ಮೊಹಿಂದರ್ ಸಿಂಗ್ ತಮ್ಮ ಸ್ಕೂಟಿಯಲ್ಲಿ ಸಾಗಿದರೆ ಅವರ ಪುತ್ರ ಬುಲೆಟ್ ಬೈಕ್ ಬಳಸಿ  ಗೋಕಲ್‍ ಪುರಿಯಿಂದ ಕರ್ದಂಪುರಿಗೆ ಒಂದು ಗಂಟೆಯಲ್ಲಿ ಸುಮಾರು 20 ಟ್ರಿಪ್ ನಡೆಸಿದ್ದರು. ಮಹಿಳೆಯರು ಹಾಗೂ ಮಕ್ಕಳನ್ನು ಕರೆದೊಯ್ಯಲಿದ್ದರೆ ಒಮ್ಮೆಗೆ ಮೂವರಿಂದ ನಾಲ್ಕು ಮಂದಿಯನ್ನು ಕರೆದೊಯ್ದಿದ್ದರು. ಕೆಲ ಮುಸ್ಲಿಂ ಬಾಲಕರ ತಲೆಗೆ ಸಿಖ್ಖರ ಪೇಟ ತೊಡಿಸಿ ಕರೆದುಕೊಂಡು ಹೋಗಿದ್ದಾಗಿಯೂ ಅವರು ಹೇಳುತ್ತಾರೆ.

"ನಾನು ಯಾವುದೇ ಹಿಂದು ಅಥವಾ ಮುಸ್ಲಿಂ ವ್ಯಕ್ತಿಯನ್ನು ನೋಡಿಲ್ಲ, ನಾನು ಕೇವಲ ಜನರನ್ನು ನೋಡಿದೆ. ಪುಟ್ಟ ಮಕ್ಕಳನ್ನು ನೋಡಿದೆ. ಅವರೂ ನನ್ನ ಮಕ್ಕಳಂತೆಯೇ ಅನಿಸಿತು. ಅವರಿಗೆ ಏನೂ ಆಗಬಾರದೆಂದು ನಾನು ಬಯಸಿದೆ. ನಾವು ಮಾನವೀಯತೆಯಿಂದ ವರ್ತಿಸಬೇಕು. ಇದಕ್ಕಿಂತ ಹೆಚ್ಚೇನೂ ಹೇಳಲಾರೆ'' ಎಂದು ಮೊಹಿಂದರ್ ಸಿಂಗ್ ಹೇಳುತ್ತಾರೆ.

ದಿಲ್ಲಿಯಲ್ಲಿ ಮೂರು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ ಗೋಕಲ್‍ ಪುರಿ ತೀವ್ರ ಬಾಧಿತ ಪ್ರದೇಶವಾಗಿತ್ತು. ತಮ್ಮ ಮಾನವೀಯ ಕಾರ್ಯದಿಂದ ತಂದೆ ಮಗ ಇಬ್ಬರೂ ಈಗ ಕರ್ದಂಪುರಿಯಲ್ಲಿ ಚಿರಪರಿಚಿತರಾಗಿ ಬಿಟ್ಟಿದ್ದಾರೆ. 1984ರ ಸಿಖ್ ವಿರೋಧಿ ಹಿಂಸಾಚಾರ ನಡೆದಾಗ ಕೇವಲ 13 ವರ್ಷದವರಾಗಿದ್ದ ಸಿಂಗ್ ಅವರಿಗೆ ಈ ವಾರದ ಹಿಂಸಾಚಾರ ಮತ್ತೊಮ್ಮೆ ಹಿಂದಿನ ಘಟನೆಗಳು ಮರುಕಳಿಸುವಂತಿತ್ತು.

ತಮ್ಮ ಮುಸ್ಲಿಂ ಸೋದರರನ್ನು ಕರ್ದಂಪುರಿಯಲ್ಲಿ ಬಿಟ್ಟು ಮರಳಿ ಗೋಕಲ್‍ ಪುರಿಗೆ ಸಿಂಗ್ ಬಂದಾಗ ಅಲ್ಲಿ ಭಾರೀ ಹಿಂಸಾಚಾರ ನಡೆಯುತ್ತಿತ್ತು. ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ಬೆಂಕಿಗೆ ಹಚ್ಚುವುದನ್ನು ತಡೆಯಲು ಅವರು ಯತ್ನಿಸಿದರೂ ಅವರ ಮಾತಿಗೆ ದುಷ್ಕರ್ಮಿಗಳು ಕಿವಿಗೊಟ್ಟಿರಲಿಲ್ಲ. ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಕೂಡ ಬೆಂಕಿ ಹತ್ತಿ ಸ್ಫೋಟಗೊಳ್ಳಬಹುದೆಂಬ ಭಯದಿಂದ ಸಿಂಗ್ ಹತ್ತಿರದ ಸಮುದಾಯ ಕೇಂದ್ರದಲ್ಲಿದ್ದ ಸಬ್‍ ಮರ್ಸಿಬಲ್ ಪಂಪ್ ತಂದು ಬೆಂಕಿ ನಂದಿಸಿದ್ದರು.

ತಮ್ಮ ಮಳಿಗೆ ಎಲ್ಲಿ ದುಷ್ಕರ್ಮಿಗಳ ಆಕ್ರೋಶಕ್ಕೆ ತುತ್ತಾಗಬಹುದೋ ಎಂದು ಭಯಪಟ್ಟು ಸಿಂಗ್ ತಮ್ಮ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲಾ ತೆರವುಗೊಳಿಸಿದ್ದಾರೆ. ಗೋಕಲ್‍ ಪುರಿಯಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿದ್ದುಕೊಂಡು ಅಲ್ಲಿನ ಮಾರ್ಕೆಟ್ ಸಂಘದ ಅಧ್ಯಕ್ಷರೂ ಆಗಿರುವ ಸಿಂಗ್ ಅವರಂತಹವರೂ ಇಂದಿನ ವಾತಾವರಣದಲ್ಲಿ ತಾವು ಕೂಡ ಅಭದ್ರತೆಯ ಭಾವನೆ ಹೊಂದಿರುವುದನ್ನು ಒಪ್ಪಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News