'ಗಮಕದಿಂದ ಕನ್ನಡ ಕಾವ್ಯಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯ'

Update: 2020-02-29 12:26 GMT

ಉಡುಪಿ, ಫೆ.29: ಗಮನ ವಾಚನವು ಕಾವ್ಯವನ್ನು ಜನಪ್ರಿಯಗೊಳಿಸುವಲ್ಲಿ ಸಹಕಾರಿಯಾಗಿದ್ದು, ಕನ್ನಡದ ಹೆಚ್ಚಿನ ಕಾವ್ಯಗಳು ಗಮಕ ಮತ್ತು ವ್ಯಾಖ್ಯಾನ ದಿಂದಾಗಿ ಜನ ಸಾಮಾನ್ಯರವರೆಗೆ ತಲುಪಲು ಸಾಧ್ಯವಾಗಿದೆ ಎಂದು ಗಮಕಿ, ಸುಗಮ ಸಂಗೀತ ಗಾಯಕ ಚಂದ್ರಶೇಖರ್ ಕೆದ್ಲಾಯ ಬ್ರಹ್ಮಾವರ ಹೇಳಿದ್ದಾರೆ.

ಕರ್ನಾಟಕ ಗಮಕ ಕಲಾ ಪರಿಷತ್ ಮತ್ತು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ವತಿಯಿಂದ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ವಿಭುದೇಶ ತೀರ್ಥ ಸಭಾಂಗಣದ ಹಂದಾಡಿ ಅನಂತಪದ್ಮನಾಭ ಭಟ್ ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಗಮಕ ಸಮ್ಮೇಳನದ ಉದ್ಘಾಟನಾ ಸಮಾ ರಂಭದಲ್ಲಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.

ಗದ್ಯ ಕಾವ್ಯವನ್ನು ಕೂಡ ಗಮಕ ಗಾಯನಕ್ಕೆ ಅಳವಡಿಸಬಹುದಾಗಿದೆ. ಗಮಕ ಗಾಯನದ ವ್ಯಾಖ್ಯಾನವು ಹಿತಮಿತವಾಗಿರಬೇಕು. ಅದು ಗಾಯನ ಪ್ರಭಾ ವಲಯದಿಂದ ಹೊರ ಹೋಗಬಾರದು. ಇದರ ಜೊತೆಗೆ ಕಾವ್ಯ ಸೌಂದರ್ಯ ವನ್ನು ಕೂಡ ಹೇಳಬೇಕು. ವ್ಯಾಖ್ಯಾನದಿಂದ ಕಾವ್ಯಗಳು ಇನ್ನಷ್ಟು ಜನರ ಹತ್ತಿರಕ್ಕೆ ಬರುತ್ತವೆ ಎಂದರು.

ಗಮಕ ವಾಚನದಲ್ಲಿ ಪದ ವಿಂಗಡಣೆ ಮಾಡುವಾಗ ಅದರ ಅರ್ಥ ಕೆಡ ಬಾರದು. ಆದುದರಿಂದ ಪದಗಳ ಶುದ್ಧರೂಪವನ್ನು ಉಚ್ಛರಿ ಸಬೇಕು. ಯಾವ ಶೈಲಿಯಲ್ಲಿ ಹಾಡಿದರೂ ಭಾವಪೂರ್ಣವಾಗಿದ್ದರೆ ಮಾತ್ರ ಅದು ಕಾವ್ಯ ಗಾಯನ ಎನಿಸುತ್ತದೆ. ಕೀರ್ತನೆ, ವಚನ, ಭಾವಗೀತೆಗಳ ಗಾಯನವನ್ನೂ ಗಮಕಗಾಯನ ಎನ್ನಬಹುದಾಗಿದೆ. ಇಂದು ಇದು ಲಘು ಸಂಗೀತ ಹಾಗೂ ಸುಗಮ ಸಂಗೀತ ಎಂದೂ ಪ್ರಸಿದ್ಧವಾಗಿದೆ. ಈಗ ವಾದ್ಯಗಳ ಅಬ್ಬರದಿಂದ ಇದರ ಸಾಹಿತ್ಯವು ಗೌಣವಾಗುತ್ತ ಸಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರಾವಳಿಯ ಗಮಕ ಶೈಲಿಗೂ ಘಟ್ಟದ ಮೇಲಿನ ಗಮಕ ಶೈಲಿಗೂ ಅಂತರ ಇದೆ. ಘಟ್ಟದ ಮೇಲಿನ ಶೈಲಿಯು ಶಾಸ್ತ್ರೀಯ ಸಂಗೀತದ ಪ್ರಭಾವಕ್ಕೆ ಒಳಗಾಗಿ ದ್ದರೆ, ಕರಾವಳಿಯ ಶೈಲಿಯು ಯಕ್ಷಗಾನದ ಪ್ರಭಾವಕ್ಕೆ ಒಳಗಾಗಿದೆ. ಹಿಂದಿನ ಕೆಲವು ಗಮಕ ಗಾಯಕರು ಯಕ್ಷಗಾನ ಕಲಾವಿದರೇ ಆಗಿದ್ದರು. ಆದರೆ ಇತ್ತೀಚೆಗೆ ಕೆಲವರು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಿಂದ ಬಂದವರಲ್ಲಿ ಯಕ್ಷಗಾನದ ಪ್ರಭಾವ ಇಲ್ಲದಿರುವುದನ್ನು ಗಮನಿಸಬಹುದು ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಬಯ ಲಾಟ, ತಾಳಮದ್ದಳೆ, ಹರಿಕಥೆಗಳೆಲ್ಲ ಗಮಕಗಳೇ ಆಗಿದ್ದು, ಗಮಕದ ಮೂಲಕ ಪುರಾಣದ ಮಾತನ್ನು ಜತೆಗೆ ತಲುಪಿಸಬೇಕು. ಸಮಾಜಕ್ಕೆ ಬೇಕಾದ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸಿಕೊಡುವ ಸಾಧನವೇ ಗಮಕ. ಈ ಭಾಗದಲ್ಲಿ ಯಕ್ಷಗಾನ ಹೆಚ್ಚು ಜನಪ್ರಿಯವಾಗಿರುವುದರಿಂದ ಗಮಕ ಜನರ ಮ ಮುಟ್ಟುತ್ತದೆ ಎಂದು ಹೇಳಿದರು.

ಡಾ.ವಾಸುದೇವ ಎಚ್.ಆರ್.ಹೊಸಹಳ್ಳಿ ಶಿಖರೋಪನ್ಯಾಸ ನೀಡಿ, ಇಂದಿನ ವಿಜ್ಞಾನ ಯುಗದಲ್ಲಿ ಪ್ರಾಚೀನವಾದ ಗಮಕ ಕಲೆಯು ಮಕ್ಕಳಿಗೆ ತಲುಪುತ್ತಿಲ್ಲ. ಮೊಬೈಲ್, ಟಿವಿ ಮಕ್ಕಳ ಮನಸ್ಸನ್ನು ಕೆಡಿಸುತ್ತಿದೆ. ಈ ಕಲೆಯ ಬಗ್ಗೆ ಯಾರಿಗೂ ಆಸಕ್ತಿ ಇಲ್ಲವಾಗಿದೆ. ಈ ಬಗ್ಗೆ ಚಿಂತನೆ ಮಾಡದಿದ್ದರೆ ಮುಂದೆ ಅಧಃಪತನಕ್ಕೆ ಕಾರಣವಾಗಲಿದೆ ಎಂದರು.

ಕಾವ್ಯವನ್ನು ಜನರಿಗೆ ತಲುಪಿಸುವ ಮಾಧ್ಯಮವೇ ಈ ಗಮಕ ಕಲೆ. ಗಮಕವು ನಮ್ಮ ಸಂಸ್ಕೃತಿಯನ್ನು ಉಳಿಸುವ ಕಲೆಯಾಗಿದೆ. ಆದುದರಿಂದ ಸಂಸ್ಕೃತಿಯ ಉಳಿಸುವ ಚಿಂತನೆಯೊಂದಿಗೆ ಗಮಕ ಕಲೆಯನ್ನು ಬೆಳೆಸಬೇಕು. ಪುರಾಣ ಕಾವ್ಯಗಳನ್ನು ಗಮಕದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಅವರು ತಿಳಿಸಿದರು.

ಸಾಹಿತಿ ಬೆಳಗೊಡು ರಮೇಶ್ ಭಟ್, ಹಂದಾಡಿ ಅನಂತಪದ್ಮನಾಭ ಭಟ್ ಸಂಸ್ಮರಣೆ ಮಾಡಿದರು. ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ಉಡುಪಿ ಪಿಪಿಸಿಯ ಗೌರವ ಕಾರ್ಯದರ್ಶಿ ಡಾ.ಜಿ. ಎಸ್.ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಪ್ರಾಂಶು ಪಾಲ ಡಾ.ರಾಘವೇಂದ್ರ ಎ. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ. ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿ ಗಳಾಗಿದ್ದರು.

ಪರಿಷತ್‌ನ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಉಡುಪಿ ತಾಲೂಕು ಗೌರವಾಧ್ಯಕ್ಷ ವಿದ್ವಾನ್ ಮಧೂರು ಬಾಲ ಸುಬ್ರಹ್ಮಣ್ಯಂ, ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರೊ.ನಾರಾಯಣ ಶೇಡಿಕಜೆ ಉಪಸ್ಥಿತರಿದ್ದರು. ಉಡುಪಿ ತಾಲೂಕು ಘಟಕದ ಉಪಾಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ರಾವ್ ವಂದಿಸಿದರು. ಕುಂದಾಪುರ ಘಟಕದ ಅಧ್ಯಕ್ಷ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News