Breaking News: ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕ-ತಾಲಿಬಾನ್

Update: 2020-02-29 17:39 GMT

ದೋಹಾ (ಕತರ್), ಫೆ. 29: ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದ ಮಹತ್ವದ ಒಪ್ಪಂದವೊಂದಕ್ಕೆ ಅಮೆರಿಕ ಶನಿವಾರ ತಾಲಿಬಾನ್ ಜೊತೆಗೆ ಸಹಿ ಹಾಕಿದೆ. ಅಫ್ಘಾನಿಸ್ತಾನದಿಂದ ಅಮೆರಿಕದ ಎಲ್ಲ ಸೈನಿಕರನ್ನು 14 ತಿಂಗಳುಗಳಲ್ಲಿ ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಒಪ್ಪಂದ ಒಳಗೊಂಡಿದೆ.

ಒಪ್ಪಂದದ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಸರಕಾರ ಮತ್ತು ತಾಲಿಬಾನ್ ನಡುವೆ ಮಾತುಕತೆ ನಡೆಯುವುದೆಂದು ನಿರೀಕ್ಷಿಸಲಾಗಿದೆ. ಮಾತುಕತೆ ಯಶಸ್ವಿಯಾದರೆ 18 ವರ್ಷಗಳ ಭೀಕರ ರಕ್ತಪಾತಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.

ಕತರ್ ರಾಜಧಾನಿ ದೋಹಾದ ವಿಲಾಸಿ ಹೊಟೇಲೊಂದರಲ್ಲಿ ತಾಲಿಬಾನ್ ಪರವಾಗಿ ಅದರ ಸಂಧಾನಕಾರ ಮುಲ್ಲಾ ಬರಾದರ್ ಮತ್ತು ಅಮೆರಿಕ ಪರವಾಗಿ ಅದರ ಮುಖ್ಯ ಸಂಧಾನಕಾರ ಝಲ್ಮಾಯ್ ಖಲೀಲ್‌ ಝಾದ್ ಒಪ್ಪಂದಕ್ಕೆ ಸಹಿ ಹಾಕಿದರು. ಬಳಿಕ ಇಬ್ಬರು ಕೈಕುಲುಕಿದರು.

ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಲ್-ಖಾಯಿದದೊಂದಿಗಿನ ಸಂಬಂಧವನ್ನು ಕಡಿಗೊಳಿಸುವ ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಿ ಎಂದು ಅವರು ಈ ಸಂದರ್ಭದಲ್ಲಿ ತಾಲಿಬಾನನ್ನು ಒತ್ತಾಯಿಸಿದರು.

ಆದರೆ, ಅಮೆರಿಕ-ತಾಲಿಬಾನ್ ನೇರೆ ಮಾತುಕತೆಯಿಂದ ಹೊರಗಿದ್ದ ಅಫ್ಘಾನ್ ಸರಕಾರದ ನಿಲುವು ಏನು ಎನ್ನುವುದು ಸ್ಪಷ್ಟವಾಗಿಲ್ಲ. ಅದೇ ವೇಳೆ, ಚುನಾವಣಾ ಫಲಿತಾಂಶದಲ್ಲಿನ ವಿವಾದದಿಂದಾಗಿ ದೇಶದಲ್ಲಿ ಹೊಸದಾಗಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ಒಪ್ಪಂದದ ಶರತ್ತುಗಳಿಗೆ ಅನುಗುಣವಾಗಿ ತಾಲಿಬಾನ್ ನಡೆದರೆ, ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಅಫ್ಘಾನಿಸ್ತಾನದಲ್ಲಿರುವ ತಮ್ಮ ಎಲ್ಲ ಪಡೆಗಳನ್ನು 14 ತಿಂಗಳುಗಳಲ್ಲಿ ಹಿಂದಕ್ಕೆ ಪಡೆದುಕೊಳ್ಳಲಿವೆ.

 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ, ಅಮೆರಿಕವು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ಅದರ ತಾಲಿಬಾನ್ ಸರಕಾರವನ್ನು ಉರುಳಿಸಿತ್ತು. ಅಂದಿನಿಂದ ಇಂದಿನವರೆಗೆ ಅಮೆರಿಕ ಮತ್ತು ಅಫ್ಘಾನ್ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವೆ ಯುದ್ಧ ನಡೆಯುತ್ತಿದೆ.

72 ಲಕ್ಷ ಕೋಟಿ ರೂ. ಖರ್ಚು ಮಾಡಿದ ಅಮೆರಿಕ

ಯುದ್ಧ ಮತ್ತು ಅಫ್ಘಾನಿಸ್ತಾನದ ಮರುನಿರ್ಮಾಣಕ್ಕಾಗಿ ಅಮೆರಿಕವು ಈವರೆಗೆ ಒಂದು ಟ್ರಿಲಿಯ ಡಾಲರ್ (ಸುಮಾರು 72 ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿದೆ ಎನ್ನಲಾಗಿದೆ.

2,400 ಅಮೆರಿಕ ಸೈನಿಕರು, ಸಾವಿರಾರು ಅಫ್ಘಾನ್ ಸೈನಿಕರ ಸಾವು

ಈ ಅವಧಿಯಲ್ಲಿ ಸುಮಾರು 2,400 ಅಮೆರಿಕ ಸೈನಿಕರು ಹಾಗೂ ಸಾವಿರಾರು ಅಫ್ಘಾನ್ ಸೈನಿಕರು ಹತರಾಗಿದ್ದಾರೆ. ತಾಲಿಬಾನ್ ಉಗ್ರರೂ ಸಾವಿರಾರು ಸಂಖ್ಯೆಯಲ್ಲಿ ಸತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾವಿರಾರು ನಾಗರಿಕರ ಮಾರಣಹೋಮವೂ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News