'ಇದು ನನ್ನ ಕರ್ತವ್ಯ': 8 ತಿಂಗಳ ತುಂಬು ಗರ್ಭಿಣಿಯಾದರೂ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ ಶಾಸಕಿ
ಮುಂಬೈ : ಶುಕ್ರವಾರ ಮಹಾರಾಷ್ಟ್ರ ವಿಧಾನಸಭಾ ಅಧಿವೇಶನಕ್ಕೆ ಆಗಮಿಸಿದ ಬೀಡ್ ಕ್ಷೇತ್ರದ ಬಿಜೆಪಿ ಶಾಸಕಿ ನಮಿತಾ ಮುಂಡದ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಎಂಟು ತಿಂಗಳ ಗರ್ಭಿಣಿಯಾಗಿರುವ ಹೊರತಾಗಿಯೂ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಕರ್ತವ್ಯಬದ್ಧತೆ ತೋರಿದ ಪ್ರಥಮ ಶಾಸಕಿ ಎಂಬ ಹೆಗ್ಗಳಿಕೆಗೂ ನಮಿತಾ ಪಾತ್ರರಾಗಿದ್ದಾರೆ.
``ಬಜೆಟ್ ಅಧಿವೇಶನ ನಡೆಯುತ್ತಿದೆ, ಅದರಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ. ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿಧಾನಸಭೆಯಲ್ಲಿ ಎತ್ತಬೇಕಾಗಿದೆ'' ಎಂದು ಅವರು ಹೇಳಿದರು.
"ಇತರ ಗರ್ಭಿಣಿಯರಂತೆಯೇ ನಾನು ಕೂಡಾ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ, ಆದರೆ ವೈದ್ಯರ ಸಲಹೆಯಂತೆಯೇ ನಡೆದುಕೊಂಡು ಜತೆಗೆ ನನ್ನ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದೇನೆ'' ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಿತಾರನ್ನು ಎನ್ ಸಿಪಿ ಕಣಕ್ಕಿಳಿಸಿತ್ತಾದರೂ ಕೊನೇ ಕ್ಷಣದಲ್ಲಿ ಆಕೆ ಎನ್‍ಸಿಪಿ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.