×
Ad

ದಿಲ್ಲಿ ಹಿಂಸಾಚಾರ: ಪೊಲೀಸರಿಂದ ಏಕಪಕ್ಷೀಯ ತನಿಖೆ; ಕಾಂಗ್ರೆಸ್ ಆರೋಪ

Update: 2020-02-29 21:51 IST

ಹೊಸದಿಲ್ಲಿ,ಫೆ.29: 42ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ದಿಲ್ಲಿ ಹಿಂಸಾಚಾರದ ಬಗ್ಗೆ ಪೊಲೀಸರು ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಪಕ್ಷವು ಶನಿವಾರ ಆಪಾದಿಸಿದೆ.

ಪ್ರತಿಭಟನಕಾರರು ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಗಂಭೀರವಾದ ಆರೋಪಗಳನ್ನು ಹೊರಿಸಿದಂತಹ ಪ್ರಕರಣಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಆ್ಯಮಿಕಸ್ ಕ್ಯೂರಿಯನ್ನು ನೇಮಿಸಬೇಕೆಂದು ಅದು ಆಗ್ರಹಿಸಿದೆ.

ರಾಜಧಾನಿ ದಿಲ್ಲಿಯಲ್ಲಿ ಸಹಜ ಸ್ಥಿತಿ ಇನ್ನೂ ಸ್ಥಾಪನೆಯಾಗಿಲ್ಲ ಹಾಗೂ ಭಯದ ವಾತಾವರಣ ನೆಲೆಸಿದೆಯೆಂದು ಪಕ್ಷದ ಹಿರಿಯ ವಕ್ತಾರ ಆನಂದ್ ಶರ್ಮಾ ತಿಳಿಸಿದ್ದಾರೆ.

 ‘‘ದಿಲ್ಲಿಯನ್ನು ನಾಲ್ಕು ದಿನಗಳ ಕಾಲ ಹೊತ್ತಿ ಉರಿಯಲು ಬಿಟ್ಟಿದ್ದ ಪೊಲೀಸರು ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದ್ದಾರೆ’’ ಎಂದು ಅವರು ಆಪಾದಿಸಿದರು.

     ‘‘ದ್ವೇಷ ಭಾಷಣದ ಕುರಿತ ವ್ಯಾಖ್ಯಾನವೇನು?. ಒಂದು ವೇಳೆ ಅವನ್ನು ಬಿಜೆಪಿ ನಾಯಕರು ಮಾಡಿದ್ದಲ್ಲಿ, ಅದು ದ್ವೇಷಭಾಷಣವೆನಿಸುವುದಿಲ್ಲ ಆಘಾತಕಾರಿಯೆಂದರೆ, ಏಕತೆ ಎಂಬ ಸಂಘಟನೆಯ ಹಾಗೂ ಒಂದು ಗುಂಪಿನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರತಿಭಟನೆಗಳು ಸಮಾಜಕ್ಕೆ ಬೆದರಿಕೆಯಾಗಿವೆ ಎಂದು ಹೇಳಲಾಗಿದೆ. ‘‘ ನಾವು ನಮ್ಮ ಪ್ರತಿಭಟನೆಯನ್ನು ಕೈಬಿಡಲಾರೆವು ಅದಕ್ಕಾಗಿ ನಾವು ಸಾಯಲೂ ಸಿದ್ಧ’’ ಎಂದು ಹೇಳಿದ್ದನ್ನು ದ್ವೇಷ ಭಾಷಣವೆಂದು ಪರಿಗಣಿಸಲಾಗಿದೆ ಹಾಗೂ ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

‘‘ಈ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಗಮನಕ್ಕೆ ತೆಗೆದುಕೊಳ್ಳಬೇಕು ಹಾಗೂ ಜನರನ್ನು ಜೈಲಿಗೆ ತಳ್ಳಲಾದ ಎಲ್ಲಾ ಪ್ರಕರಣಗಳಲ್ಲಿ ಆ್ಯಮಿಕಸ್ ಕ್ಯೂರಿಯ ನೇಮಕವಾಗಬೇಕು’’ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ಸುಪ್ರೀಂಕೋರ್ಟ್ ಸಂವಿಧಾನದ ಸಂರಕ್ಷಕನಾಗಿದ್ದಾನೆ. ದ್ವೇಷ ಭಾಷಣಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬಿಸುವುದರಿಂದ ಏನೂ ಪ್ರಯೋಜನವಿಲ್ಲ. ಸುಪ್ರೀಂಕೋರ್ಟ್ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿ ಸಂವಿಧಾನವು ಖಾತರಿಪಡಿಸಿರುವ ಪೌರರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ’’ ಎಂದವರು ಹೇಳಿದರು.

ದಿಲ್ಲಿ ಮುಖ್ಯಮ ಂತ್ರಿ, ಕೇಂದ್ರ ಅಥವಾ ಗೃಹ ಸಚಿವಾಲಯದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ಆದರೆ ನಮಗೆ ನ್ಯಾಯಾಲಯಗಳ ಬಗ್ಗೆ ಭರವಸೆಯಿದೆಯೆಂದು ಆನಂದ್ ಶರ್ಮಾ ಹೇಳಿದರು.

  ಈಶಾನ್ಯ ದಿಲ್ಲಿಯಲ್ಲಿ ಕಳೆದ ಸೋಮವಾರ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ 42 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೌರತ್ವ ಕಾಯ್ದೆ ಬೆಂಬಲಿಗರ ಹಿಂಸಾಚಾರದಿಂದಾಗಿ ಈಶಾನ್ಯ ದಿಲ್ಲಿಯ ಜಾಫ್ರಾಬಾದ್, ವೌಜ್‌ಪುರ, ಚಾಂದ್‌ಬಾಗ್, ಖುರೇಜಿ ಖಾಸ್ ಹಾಗೂ ಭಜನ್‌ಪುರ ಪ್ರದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರು ವ್ಯಾಪಕ ಹಿಂಸಾಚಾರವೆಸಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News