370ನೆ ವಿಧಿ ರದ್ದತಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸುವ ಬಗ್ಗೆ ನಾಳೆ ಸುಪ್ರೀಂ ತೀರ್ಪು
ಹೊಸದಿಲ್ಲಿ, ಫೆ.29: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕನಿಷ್ಠ ಏಳು ನ್ಯಾಯಾಧೀಶರನ್ನು ಒಳಗೊಂಡ ವಿಸ್ತ್ರತ ಪೀಠಕ್ಕೆ ಒಪ್ಪಿಸಬೇಕೇ ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀರ್ಪನ್ನು ಪ್ರಕಟಿಸಲಿದೆ.
ನ್ಯಾ.ರಮಣ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಆರ್.ಎಸ್.ರೆಡ್ಡಿ,ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ ಅವರನ್ನೊಳಗೊಂಡ ಸಂವಿಧಾನ ಪೀಠವು ಜ.23ರಂದು ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಅರ್ಜಿದಾರರಲ್ಲೋರ್ವರ ಪರ ವಕೀಲ ದಿನೇಶ ದ್ವಿವೇದಿ ಅವರು,ಈ ಹಿಂದಿನ ಪ್ರೇಮನಾಥ ಕೌಲ್(1959) ಮತ್ತು ಸಂಪತ್ ಪ್ರಕಾಶ(1968) ಪ್ರಕರಣಗಳಲ್ಲಿ ವಿಧಿ 370ರ ವ್ಯಾಪ್ತಿ ಮತ್ತ್ತು ಉದ್ದೇಶದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಪರಸ್ಪರ ವಿರುದ್ಧ ತೀರ್ಪುಗಳನ್ನು ನೀಡಿತ್ತು ಎಂದು ಬೆಟ್ಟು ಮಾಡಿದ್ದರು. ಈ ಎರಡೂ ತೀರ್ಪುಗಳನ್ನು ಐವರು ನ್ಯಾಯಾಧೀಶರ ಪೀಠಗಳು ನೀಡಿದ್ದರಿಂದ ಈಗಿನ ವಿಷಯವನ್ನು ಏಳು ಅಥವಾ ಅದಕ್ಕೂ ಹೆಚ್ಚಿನ ನ್ಯಾಯಾಧೀಶರನ್ನು ಒಳಗೊಂಡಿರುವ ಪೀಠಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದರು.
ವಿಧಿ 370ನ್ನು ರದ್ದುಗೊಳಿಸುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಕನಿಷ್ಠ 23 ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿವೆ.