ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಮೈತ್ರಿ: ನಿತೀಶ್

Update: 2020-03-01 15:26 GMT
ಫೈಲ್ ಚಿತ್ರ

 ಹೊಸದಿಲ್ಲಿ,ಫೆ.1: ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷವು ಎನ್‌ಡಿಎ ಮೈತ್ರಿಯೊಂದಿಗೆ ಕಣಕ್ಕಿಳಿಯಲಿದೆ ಹಾಗೂ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್ ರವಿವಾರ ತಿಳಿಸಿದ್ದಾರೆ. ಬಿಹಾರ ವಿಧಾನಸಭೆಯು 243 ಸ್ಥಾನಗಳನ್ನು ಹೊಂದಿದೆ.

  ತನ್ನ 69ನೇ ಹುಟ್ಟು ಹಬ್ಬದ ಪ್ರಯುಕ್ತ ರವಿವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ಜೆಡಿಯು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಅವರು, ‘‘ ಎನ್‌ಡಿಎ ಜೊತೆಗೂಡಿ ನಾವು ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದೇವೆ ಹಾಗೂ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದೇವೆ. ಕಾನೂನು ಹಾಗೂ ಶಿಸ್ತು ಪರಿಸ್ಥಿತಿ ಸುಧಾರಣೆಗೊಂಡಿದೆ ಹಾಗೂ ಬಿಹಾರವು ಜನಸಂಖ್ಯೆಗೆ ಅನುಗುಣವಾಗಿ ಅಪರಾಧಗಳ ಅನುಪಾತವು ದೇಶದಲ್ಲೇ ಅತ್ಯಂತ ಕನಿಷ್ಠವಾದುದಾಗಿದೆ ಎಂದು ಹೇಳಿರು.

     ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಜರಗಿಸುವ ಮೂಲಕ ಜೆಡಿಯು-ಬಿಜೆಪಿ ಸರಕಾರವು ಭಾಗಲ್ಪುರ ಗಲಭೆ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಟ್ಟಿದೆ ಎಂದು ಬಿಹಾರ ಮುಖ್ಯಮಂತ್ರಿ ತಿಳಿಸಿದರು. ಬಿಹಾರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಜೆಡಿಯು ಪಕ್ಷವು ‘‘2020ರಲ್ಲಿ ಫಿರ್ ಸೆ ನಿತೀಶ್ (2020ರಲ್ಲಿ ಮತ್ತೊಮ್ಮೆ ನಿತೀಶ್)’’ ಎಂಬ ಘೋಷಣೆಯನ್ನು ಆರಂಭಿಸಿದೆ. 2020ರಲ್ಲಿ ನಿತೀಶ್‌ರನ್ನು ಮುಗಿಸಿ (2020 ಫಿನಿಶ್ ನಿತೀಶ್) ಎಂಬ ಪ್ರತಿಪಕ್ಷ ಆರ್‌ಜೆಡಿಯ ಘೋಷಣೆಗೆ ಪ್ರತಿಕ್ರಿಯೆಯಾಗಿ ಅದು ಈ ಘೋಷಣೆಗೆ ಚಲಾವಣೆಗೆ ತಂದಿದೆ.

ನಿತೀಶ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ರಾಜ್ಯಾದ್ಯಂತ ಬಂದಿದ್ದ ಜೆಡಿಯುನ ಬೂತ್‌ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.

 ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಬಿಹಾರ ವಿಧಾನಸಭೆಯು ಈಗಾಗಲೇ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿವಾದವು ಈಗಾಗಲೇ ನ್ಯಾಯಾಲಯದ ಮೆಟ್ಟಲೇರಿರುವುದರಿಂದ ಆ ಬಗ್ಗೆ ತಾಳ್ಮೆಯಿಂದ ವರ್ತಿಸಬೇಕೆಂದು ನಿತೀಶ್ ‌ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News